ಅಂಬಲಪಾಡಿ ಕಾಂಗ್ರೆಸ್ ಅಭ್ಯರ್ಥಿ ವಿುದ್ಧ ಕರಪತ್ರ ಹಂಚಿ ಅಪಪ್ರಚಾರ
ಉಡುಪಿ, ಸೆ.1: ಉಡುಪಿ ನಗರಸಭೆ ಚುನಾವಣೆಗೆ ಸಂಬಂಧಿಸಿ ಅಂಬಲ ಪಾಡಿ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ, ನ್ಯಾಯವಾದಿ ರೆನೋಲ್ಡ್ ಪ್ರವೀಣ್ ಕುಮಾರ್(55) ವಿರುದ್ಧ ಬಿಜೆಪಿ ಅಭ್ಯರ್ಥಿ ಹಾಗೂ ಕಾರ್ಯಕರ್ತರು ಕರಪತ್ರ ಗಳನ್ನು ಹಂಚಿ ಅಪಪ್ರಚಾರ ನಡೆಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಬಲಪಾಡಿ ವಾರ್ಡ್‌ನ ಬಿಜೆಪಿ ಅಭ್ಯರ್ಥಿ ಹರೀಶ್ ಶೆಟ್ಟಿ, ಪಕ್ಷೇತರ ಅಭ್ಯರ್ಥಿ ಸುರೇಂದ್ರ ಶೆಟ್ಟಿ ಹಾಗೂ ಬಿಜೆಪಿ ಕಾರ್ಯಕರ್ತ ದೇವದಾಸ್ ಶೆಟ್ಟಿಗಾರ್ ಆ.30ರಂದು ಅಂಬಲಪಾಡಿ ಮತದಾರರ ಪ್ರತಿಯೊಂದು ಮನೆಗೆ ಅಂಚೆಯ ಮೂಲಕ ಮುದ್ರಿತ 4 ಪುಟಗಳ ಕರಪತ್ರದಲ್ಲಿ ರೆನೋಲ್ಡ್ ಪ್ರವೀಣ್ ಕುಮಾರ್‌ರನ್ನು ಹೀನಾಯವಾಗಿ ಬಿಂಬಿಸಿದ್ದು, ಅದೇ ದಿನ ರಾತ್ರಿ 8:30ರ ಸುಮಾರಿಗೆ ಎರಡು ಬೈಕಿನಲ್ಲಿ ಹೆಲ್ಮೆಟ್ ಧರಿಸಿಕೊಂಡು ಬಂದ ಇಬ್ಬರು ವ್ಯಕ್ತಿಗಳು ಅಂಬಲಪಾಡಿ ವಾರ್ಡಿನ ಎಲ್ಲ ಮನೆಗಳ ಎದುರು ಇಂತಹದ್ದೇ ಕರಪತ್ರಗಳನ್ನು ಎಸೆದು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರೆನೋಲ್ಡ್ ಪ್ರವೀಣ್ ಕುಮಾರ್‌ರನ್ನು ಮತದಾರರು ಕೀಳಾಗಿ ಕಾಣ ಬೇಕೆಂದು ಹಾಗೂ ಆ.31ರಂದು ನಡೆದ ನಗರಸಭೆ ಚುನಾವಣೆಯಲ್ಲಿ ರೆನೋಲ್ಡ್ ಪ್ರವೀಣ್ ಕುಮಾರ್ ಸೋಲಬೇಕೆಂಬ ಉದ್ದೇಶದಿಂದ ಈ ಅಪಪ್ರಚಾರ ಮಾಡಿರುವುದಾಗಿ ದೂರಲಾಗಿದೆ. ರೆನೋಲ್ಡ್ ಪ್ರವೀಣ್ ಕುಮಾರ್ ನೀಡಿದ ದೂರಿನಂತೆ ನ್ಯಾಯಾಲಯದ ಅನುಮತಿ ಪಡೆದು ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.





