ಸತತ ಎರಡನೇ ಬಾರಿ ಬೆಳ್ಳಿ ಜಯಿಸಿದ ಭಾರತದ ಮಹಿಳಾ ಸ್ಕ್ವಾಷ್ ತಂಡ

ಹೊಸದಿಲ್ಲಿ,ಸೆ.1: ಹಾಂಕಾಂಗ್ ವಿರುದ್ಧ ಏಶ್ಯನ್ ಗೇಮ್ಸ್ ಫೈನಲ್‌ನಲ್ಲಿ ಶರಣಾದ ಭಾರತದ ಮಹಿಳಾ ಸ್ಕ್ವಾಷ್ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ. ಕಳೆದ ಆವೃತ್ತಿಯ ಗೇಮ್ಸ್ ನಲ್ಲೂ ಎರಡನೇ ಸ್ಥಾನ ಪಡೆದಿದ್ದ ಭಾರತ ಸತತ ಎರಡನೇ ಬಾರಿ ಬೆಳ್ಳಿ ಪದಕ ಗೆದ್ದುಕೊಂಡಿದೆ. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಸುನಯನಾ ಕುರುವಿಲ್ಲಾ ಹಾಗೂ ಭಾರತದ ನಂ.1 ಆಟಗಾರ್ತಿ ಜೋಶ್ನಾ ಚಿನ್ನಪ್ಪ ತಾವಾಡಿದ ಸಿಂಗಲ್ಸ್ ಪಂದ್ಯದಲ್ಲಿ ಸೋತರು. ಭಾರತ ಮೂರು ದಿನಗಳ ಅಂತರದಲ್ಲಿ ಎರಡನೇ ಬಾರಿ ಹಾಂಕಾಂಗ್‌ಗೆ ಶರಣಾಯಿತು. ಶುಕ್ರವಾರ ನಡೆದ ಸೆಮಿ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಮಲೇಶ್ಯಾವನ್ನು ಮಣಿಸಿ ಅಚ್ಚರಿ ಫಲಿತಾಂಶ ದಾಖಲಿಸಿದ್ದ ಭಾರತ ಚಿನ್ನ ಗೆಲ್ಲುವ ಭರವಸೆ ಮೂಡಿಸಿತ್ತು. ಭಾರತ ಸ್ಕ್ವಾಷ್ ತಂಡ ಗೇಮ್ಸ್‌ನಲ್ಲಿ ಒಟ್ಟು 5 ಪದಕಗಳನ್ನು ಗೆದ್ದುಕೊಂಡಿದೆ. ವೈಯಕ್ತಿಕ ವಿಭಾಗದಲ್ಲಿ ಮೂರು ಕಂಚಿನ ಪದಕ ಜಯಿಸಿದ್ದ ಭಾರತ ಪುರುಷರ ತಂಡ ವಿಭಾಗದಲ್ಲಿ ಕಂಚು ಜಯಿಸಿತ್ತು.
ಉಭಯ ತಂಡಗಳ ದುರ್ಬಲ ಆಟಗಾರರ ನಡುವೆ ಮೊದಲ ಸಿಂಗಲ್ಸ್ ಪಂದ್ಯ ನಡೆಯಿತು. ವಿಶ್ವದ ನಂ.88ನೇ ಆಟಗಾರ್ತಿ ಕುರುವಿಲ್ಲಾ 51ನೇ ರ್ಯಾಂಕಿನ ಝಿ ಲೊಕ್ ಹೊರನ್ನು ಎದುರಿಸಿದರು. ಭಾರತದ ಯುವ ಆಟಗಾರ್ತಿ ಕುರುವಿಲ್ಲಾ ಗ್ರೂಪ್ ಹಂತದಲ್ಲಿ ಹೋ ವಿರುದ್ಧ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಗೆಲುವು ಸಾಧಿಸಿದ್ದರು. ಇಂದು ಕುರುವಿಲ್ಲಾ ಹಾಗೂ ಹೊ ನಡುವೆ ಪೈಪೋಟಿ ಕಂಡುಬಂದಿತು. ಅಂತಿಮವಾಗಿ ಕುರುವಿಲ್ಲಾ 8-11, 6-11, 12-10, 3-11 ಅಂತರದಿಂದ ಸೋತಿದ್ದಾರೆ. ಗೆಲ್ಲಲೇಬೇಕಾದ ಎರಡನೇ ಸಿಂಗಲ್ಸ್ ಪಂದ್ಯದಲ್ಲಿ ಜೋಶ್ನಾ ಚಿನ್ನಪ್ಪ ಹಾಂಕಾಂಗ್‌ನ ಅನ್ನಿ ವಿರುದ್ಧ 3-11, 9-11, 5-11 ಅಂತರದಿಂದ ಆಘಾತಕಾರಿ ಸೋಲುಂಡರು. ಸೆಮಿ ಫೈನಲ್‌ನಲ್ಲಿ 8 ಬಾರಿಯ ವಿಶ್ವ ಚಾಂಪಿಯನ್ ನಿಕೊಲ್ ಡೇವಿಡ್‌ರನ್ನು ಸೋಲಿಸಿದ್ದ ಚಿನ್ನಪ್ಪ ಫೈನಲ್‌ನಲ್ಲಿ ನೀರಸ ಪ್ರದರ್ಶನ ನೀಡಿ ನಿರಾಸೆಗೊಳಿಸಿದರು.







