ಚೀನಾದ ಸಾಲದ ಸುಳಿಗೆ ಸಿಲುಕುತ್ತಿರುವ ದೇಶಗಳು
‘ಬೆಲ್ಟ್ ಆ್ಯಂಡ್ ರೋಡ್’ ಯೋಜನೆಗೆ ಅಪಸ್ವರ
ಬೀಜಿಂಗ್, ಸೆ. 2: ತಾವು ಚೀನಾದ ಸಾಲದ ಸುಳಿಯಲ್ಲಿ ಸಿಲುಕಿರುವುದಾಗಿ ಹಲವು ದೇಶಗಳು ಗೊಣಗಲು ಆರಂಭಿಸಿರುವುದರೊಂದಿಗೆ, ಚೀನಾದ ಮಹತ್ವಾಕಾಂಕ್ಷೆಯ ‘ಬೆಲ್ಟ್ ಆ್ಯಂಡ್ ರೋಡ್’ ವ್ಯಾಪಾರ ಮೂಲಸೌಕರ್ಯ ಯೋಜನೆಗೆ ಅಡಚಣೆಗಳು ಎದುರಾಗಿವೆ.
2013ರಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಘೋಷಿಸಿರುವ ಈ ಯೋಜನೆಯನ್ನು ‘ಹೊಸ ರೇಶ್ಮೆ ಮಾರ್ಗ’ ಎಂಬುದಾಗಿಯೂ ಕರೆಯಲಾಗುತ್ತಿದೆ. ಈ ಯೋಜನೆಯು ಜಗತ್ತಿನಾದ್ಯಂತ ರೈಲು ಮಾರ್ಗ, ರಸ್ತೆ ಮತ್ತು ಬಂದರುಗಳನ್ನು ನಿರ್ಮಿಸುವ ಕಾರ್ಯಕ್ರಮವನ್ನು ಹೊಂದಿದೆ ಹಾಗೂ ಇದಕ್ಕಾಗಿ ಚೀನಾವು ವಿವಿಧ ದೇಶಗಳಿಗೆ ಬಿಲಿಯಗಟ್ಟಳೆ ಡಾಲರ್ ಸಾಲಗಳನ್ನು ನೀಡುತ್ತಿದೆ.
ಯೋಜನೆಯ ಫಲಾನುಭವಿ ದೇಶಗಳಿಗೆ ಚೀನಾದ ಸಾಲಗಳನ್ನು ಮರುಪಾವತಿಸಲು ಸಂಪನ್ಮೂಲಗಳ ಕೊರತೆಯಿದೆ ಎಂಬ ಅಂಶ 5 ವರ್ಷಗಳ ಬಳಿಕ ಬೆಳಕಿಗೆ ಬಂದಿದೆ. ಚೀನಾವು ಈ ದೇಶಗಳಲ್ಲಿ ಸಾಲದ ಜಾಲವನ್ನು ಹರಡುತ್ತಿದೆ ಎಂಬ ಕಳವಳ ವ್ಯಕ್ತವಾಗಿದೆ. ಯೋಜನೆಯ ವಾರ್ಷಿಕ ದಿನದ ಸಂದರ್ಭದಲ್ಲಿ ಸೋಮವಾರ ಮಾಡಿದ ಭಾಷಣದಲ್ಲಿ, ‘‘ಇದು ಚೀನಾ ಕ್ಲಬ್ ಅಲ್ಲ’’ ಎಂದು ಜಿನ್‌ಪಿಂಗ್ ಹೇಳಿದ್ದಾರೆ. ‘‘ಬೆಲ್ಟ್ ಆ್ಯಂಡ್ ರೋಡ್, ಮುಕ್ತ ಹಾಗೂ ಸರ್ವರನ್ನೊಳಗೊಳ್ಳುವ ಯೋಜನೆಯಾಗಿದೆ’’ ಎಂದಿದ್ದಾರೆ.
3 ಯೋಜನೆಗಳನ್ನು ರದ್ದುಪಡಿಸಿದ ಮಲೇಶ್ಯ
ಆಗಸ್ಟ್‌ನಲ್ಲಿ ಬೀಜಿಂಗ್‌ಗೆ ಭೇಟಿ ನೀಡಿರುವ ಮಲೇಶ್ಯ ಪ್ರಧಾನಿ ಮಹಾತಿರ್ ಮುಹಮ್ಮದ್, 2000 ಕೋಟಿ ಡಾಲರ್ ರೈಲ್ವೇ ಸೇರಿದಂತೆ ಚೀನಾ ಬೆಂಬಲಿತ 3 ಯೋಜನೆಗಳನ್ನು ರದ್ದುಪಡಿಸಿರುವುದನ್ನು ಸ್ಮರಿಸಬಹುದಾಗಿದೆ.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ಗೆ ಸಂಬಂಧಿಸಿ ಚೀನಾದ ಸಾಲಗಳನ್ನು ಮರುಪಾವತಿಸಲು ಪಾಕಿಸ್ತಾನಕ್ಕೆ ಸಾಧ್ಯವಾಗಬಹುದೇ ಎಂಬ ಭೀತಿಯನ್ನು ಆಡಳಿತಾರೂಢ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷ ಈಗಾಗಲೇ ವ್ಯಕ್ತಪಡಿಸಿರುವುದನ್ನು ಸ್ಮರಿಸಬಹುದಾಗಿದೆ.
ಮಾಲ್ದೀವ್ಸ್ ದ್ವೀಪದಲ್ಲಿ ಚೀನಾದ ಚಟುವಟಿಕೆಗಳು ‘ಜಮೀನು ಒತ್ತುವರಿ’ ಮತ್ತು ‘ವಸಾಹತುಶಾಹಿ’ಗೆ ಸಮವಾಗಿದೆ ಎಂದು ಮಾಲ್ದೀವ್ಸ್‌ನ ದೇಶಭ್ರಷ್ಟ ಪ್ರತಿಪಕ್ಷ ನಾಯಕ ಮುಹಮ್ಮದ್ ನಶೀದ್ ಹೇಳಿದ್ದಾರೆ. ಮಾಲ್ದೀವ್ಸ್ ತನ್ನ ಸಾಲದ 80 ಶೇಕಡದಷ್ಟನ್ನು ಚೀನಾದಿಂದ ಪಡೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಶ್ರೀಲಂಕಾ ತೆತ್ತ ಬೆಲೆ
ಚೀನಾದ ಸಾಲದ ಶೂಲಕ್ಕೆ ಗುರಿಯಾಗಿರುವ ಶ್ರೀಲಂಕಾ ಈಗಾಗಲೇ ಅದಕ್ಕೆ ಭಾರೀ ಬೆಲೆಯನ್ನು ತೆತ್ತಿದೆ.
1.4 ಬಿಲಿಯ ಡಾಲರ್ (ಸುಮಾರು 9,940 ಕೋಟಿ ರೂಪಾಯಿ) ಸಾಲವನ್ನು ಮರುಪಾವತಿಸಲು ಅಸಾಧ್ಯವಾದ ಹಿನ್ನೆಲೆಯಲ್ಲಿ, ಕಳೆದ ವರ್ಷ ಶ್ರೀಲಂಕಾ ತನ್ನ ಆಯಕಟ್ಟಿನ ಬಂದರೊಂದನ್ನು ಚೀನಾಕ್ಕೆ 99 ವರ್ಷಗಳ ಲೀಸ್‌ಗೆ ನೀಡಿದೆ.







