10 ವರ್ಷದಲ್ಲಿ ಅರ್ಧ ಮುಳುಗಲಿದೆ ಈ ದೇಶ: ಪರಿಸರ ವಿಜ್ಞಾನಿಗಳ ಎಚ್ಚರಿಕೆ

ಬ್ಯಾಂಕಾಕ್, ಸೆ. 2: ಹವಾಮಾನ ಬದಲಾವಣೆ ಮಾತುಕತೆಗಳನ್ನು ಏರ್ಪಡಿಸಲು ಬ್ಯಾಂಕಾಕ್ ಸಿದ್ಧಗೊಳ್ಳುತ್ತಿರುವಂತೆಯೇ, ಒಂದು ಕೋಟಿಗೂ ಅಧಿಕ ಜನಸಂಖ್ಯೆಯ ನಗರ ಬೆಚ್ಚಿಬೀಳುವಂತಹ ಸುದ್ದಿಯೊಂದು ಹೊರಬಿದ್ದಿದೆ.
ಇನ್ನೊಂದು ದಶಕದಲ್ಲಿ ಥಾಯ್ಲೆಂಡ್ ರಾಜಧಾನಿಯು ಆಂಶಿಕವಾಗಿ ನೀರಿನಲ್ಲಿ ಮುಳುಗಡೆಯಾಗಲಿದೆ ಎಂಬ ಎಚ್ಚರಿಕೆಯನ್ನು ಹೊರಡಿಸಲಾಗಿದೆ. ವಿಶ್ವಸಂಸ್ಥೆಯ ಮುಂದಿನ ಹವಾಮಾನ ಸಮ್ಮೇಳನದ ಸಿದ್ಧತಾ ಸಭೆಯು ಬ್ಯಾಂಕಾಕ್‌ನಲ್ಲಿ ಮಂಗಳವಾರ ಆರಂಭಗೊಳ್ಳಲಿದೆ. ಹವಾಮಾನ ಸಮ್ಮೇಳನವು 2018ರ ಕೊನೆಯಲ್ಲಿ ಪೋಲ್ಯಾಂಡ್‌ನಲ್ಲಿ ನಡೆಯಲಿದೆ.
ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವ ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಸುಲಭವಾಗಿ ಬಲಿಯಾಗುವ ದೇಶಗಳಿಗೆ ನೆರವು ನೀಡುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಸಮ್ಮೇಳನದಲ್ಲಿ ರೂಪಿಸಲಾಗುವುದು.
ಜಾಗತಿಕ ತಾಪಮಾನವು ಏರುತ್ತಿರುವಂತೆಯೇ ಹೆಚ್ಚೆಚ್ಚು ಶಕ್ತಿಶಾಲಿ ಚಂಡಮಾರುತಗಳು, ಯದ್ವಾತದ್ವ ಮಳೆ, ತೀವ್ರ ಬರಗಾಲ ಮತ್ತು ಭಾರೀ ಪ್ರವಾಹಗಳು ಮುಂತಾದ ಅಸಹಜ ಹವಾಮಾನ ಮಾದರಿಗಳು ಹೆಚ್ಚೆಚ್ಚು ಸಂಭವಿಸುತ್ತವೆ ಎಂದು ನಿರೀಕ್ಷಿಸಲಾಗಿದೆ. ಇದು 2015ರ ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಜಾರಿಗೆ ತರವು ಜವಾಬ್ದಾರಿಯನ್ನು ಹೊತ್ತ ದೇಶಗಳ ಮೇಲಿನ ಒತ್ತಡವನ್ನು ಹೆಚ್ಚಿಸುತ್ತವೆ.
ಜೌಗುಪ್ರದೇಶದಲ್ಲಿ ನಿರ್ಮಾಣಗೊಂಡ ಬ್ಯಾಂಕಾಕ್
ಬ್ಯಾಂಕಾಕನ್ನು ಸಮುದ್ರ ಮಟ್ಟದಿಂದ 1.5 ಮೀಟರ್ ಎತ್ತರದಲ್ಲಿ ಜೌಗು ಪ್ರದೇಶದಲ್ಲಿ ನಿರ್ಮಿಸಲಾಗಿತ್ತು.
ಜಾಗತಿಕ ತಾಪಮಾನದ ಪ್ರಕೋಪಕ್ಕೆ ಮೊದಲು ಸಿಲುಕುವ ಜಗತ್ತಿನ ನಗರಗಳ ಪಟ್ಟಿಯಲ್ಲಿ ಬ್ಯಾಂಕಾಕ್ ಮೊದಲ ಸ್ಥಾನದಲ್ಲಿದೆ. ಏಶ್ಯದ ಇತರ ನಗರಗಳಾದ ಇಂಡೋನೇಶ್ಯ ರಾಜಧಾನಿ ಜಕಾರ್ತ ಮತ್ತು ಫಿಲಿಪ್ಪೀನ್ಸ್ ರಾಜಧಾನಿ ಮನಿಲಾ ಕೂಡ ಈ ಪಟ್ಟಿಯಲ್ಲಿದೆ.
40 ಶೇ. ಮುಳುಗಡೆ
ಭಾರೀ ಮಳೆ ಮತ್ತು ಹವಾಮಾನ ವ್ಯವಸ್ಥೆಯಲ್ಲಿ ಆಗುವ ಬದಲಾವಣೆಯ ಪರಿಣಾಮವಾಗಿ 2030ರಲ್ಲೇ ಬ್ಯಾಂಕಾಕ್‌ನ ಸುಮಾರು 40 ಶೇಕಡ ಮುಳುಗಡೆಯಾಗಲಿದೆ ಎಂದು ವಿಶ್ವಬ್ಯಾಂಕ್‌ನ ವರದಿಯೊಂದು ಹೇಳಿದೆ.
‘‘ಪ್ರಸಕ್ತ ನಗರವು ವರ್ಷಕ್ಕೆ 1ರಿಂದ 2 ಸೆಂಟಿ ಮೀಟರ್‌ಗಳಷ್ಟು ಮುಳುಗುತ್ತಿದೆ. ಶೀಘ್ರ ಭವಿಷ್ಯದಲ್ಲೇ ಭೀಕರ ಪ್ರವಾಹ ಸಂಭವಿಸುವ ಅಪಾಯವಿದೆ’’ ಎಂದು ಪರಿಸರ ಸಂಘಟನೆ ‘ಗ್ರೀನ್‌ಪೀಸ್’ನ ತಾರಾ ಬೋಕಮ್‌ಸ್ರಿ ಹೇಳುತ್ತಾರೆ.
ಸಮೀಪದ ಥಾಯ್ಲೆಂಡ್ ಕೊಲ್ಲಿಯಲ್ಲಿನ ಸಮುದ್ರಗಳ ಮಟ್ಟ ವರ್ಷಕ್ಕೆ 4 ಮಿಲಿಮೀಟರ್‌ನಷ್ಟು ಏರುತ್ತಿದೆ ಹಾಗೂ ಇದು ಜಾಗತಿಕ ಸರಾಸರಿಗಿಂತ ಅಧಿಕವಾಗಿದೆ.







