ಶ್ರೀಕೃಷ್ಣ ಪ್ರತಿಬಿಂಬ ಭಾರತದ ಸಂಸ್ಕೃತಿ: ಸಚಿವ ಖಾದರ್
ಶ್ರೀಕೃಷ್ಣ ಜಯಂತಿ ಆಚರಣೆ

ಮಂಗಳೂರು, ಸೆ.2: ಶ್ರೀಕೃಷ್ಣನನ್ನು ಇಂದು ಜಗತ್ತಿನೆಲ್ಲೆಡೆ ಆರಾಧಿಸಲಾಗುತ್ತಿದೆ. ಕೃಷ್ಣ ಸಮಾಜ ಸುಧಾರಕ, ಮಾರ್ಗದರ್ಶಕ, ಗೆಳೆಯನಾಗಿದ್ದಾನೆ. ಶ್ರೀಕೃಷ್ಣ ಪ್ರತಿಬಿಂಬವು ಭಾರತದ ಸಂಸ್ಕೃತಿಯಾಗಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಬಣ್ಣಿಸಿದ್ದಾರೆ.
ದ.ಕ. ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಗರದ ಪುರಭವನದ ಮಿನಿ ಸಭಾಭವನದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರಕಾರದಿಂದ ಕಳೆದ 4-5 ವರ್ಷಗಳಿಂದ ಶ್ರೀಕೃಷ್ಣ ಜಯಂತಿ ಆಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ. ದ.ಕ. ಜಿಲ್ಲೆ ಸಹೋದರ ಭ್ರಾತೃತ್ವದಿಂದ ಕೂಡಿದ್ದು, ಶಾಂತಿ ಸೌಹಾರ್ದ ಬಯಸುವ ಜಿಲ್ಲೆಯಾಗಿದೆ. ಇಲ್ಲಿ ಎಲ್ಲ ಜಾತಿ, ಜನಾಂಗದವರು ಶ್ರೀಕೃಷ್ಣನ ವ್ಯಕ್ತಿತ್ವ ಪಾಲಿಸಬೇಕು. ಶ್ರೀಕೃಷ್ಣನ ವ್ಯಕ್ತಿತ್ವ ಎಲ್ಲರಿಗೂ ಬೇಕಾಗಿದ್ದು, ಆದರ್ಶಪ್ರಾಯವಾಗಿದೆ ಎಂದು ತಿಳಿಸಿದರು.
ಮಹಾಭಾರತದ ಸಾರವೇ ಪ್ರತಿಯೊಬ್ಬ ಮನುಷ್ಯನ ಜೀವನದ ಘಟನೆಗಳಿಗೆ ಸಾಕ್ಷಿಯಾಗಿದೆ. ಶ್ರೀಕೃಷ್ಣನ ವ್ಯಕ್ತಿತ್ವ ಮಾನವರೆಲ್ಲರಿಗೆ ದಿಕ್ಸೂಚಿಯಾಗಿದೆ. ಹುಟ್ಟುವ ಮೊದಲೇ ಕೃಷ್ಣನನ್ನು ಕೊಲ್ಲುವ ತಯಾರಿ ನಡೆದಿತ್ತು. ದುಷ್ಟಶಕ್ತಿಯನ್ನು ದೂರ ಇಟ್ಟು ನ್ಯಾಯಪರ ಹಾಗೂ ಸರ್ವರ ಪ್ರೀತಿಗೆ ಪಾತ್ರನಾಗಿದ್ದನು ಎಂದು ತಿಳಿಸಿದರು.
ಮಹಾಭಾರತದಲ್ಲಿ ಪಾಂಡವರಿಗೆ ದೊಡ್ಡ ಮಟ್ಟದ ಆಯುಧ ಇರಲಿಲ್ಲ. ಪಾಂಡವರನ್ನು ಜಯಗೊಳಿಸಲು ಶ್ರೀಕೃಷ್ಣ ಕಾರಣೀಭೂತನಾಗಿದ್ದು, ಸಾಮಾಜಿಕ ನ್ಯಾಯದ ಸಂಕೇತವಾಗಿದ್ದಾನೆ. ಮುಂದಿನ ವರ್ಷದಿಂದ ಇನ್ನೂ ಅದ್ದೂರಿಯಾಗಿ ಕೃಷ್ಣನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ನ್ಯಾಯವಾದಿ ಮಹಾಬಲ ಶೆಟ್ಟಿ ಕೂಡ್ಲ ಶ್ರೀಕೃಷ್ಣ ಜಯಂತಿಯ ಸಂದೇಶ ನೀಡಿದರು. ಸಮಾರಂಭದಲ್ಲಿ ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಗೊಲ್ಲ -ಯಾದವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ.ಆರ್.ಕುಮಾರಸ್ವಾಮಿ, ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿಯ ಅಧ್ಯಕ್ಷ ಮಧುಸೂದನ್ ಆಯಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ವತ್ ಶೆಟ್ಟಿ ಮತ್ತು ತಂಡ ಪ್ರಾರ್ಥಿಸಿತು. ರಾಜೇಶ್ ಜಿ. ಸ್ವಾಗತಿಸಿದರು.
ಕೊಳಲನ್ನೇ ಮರೆತ ಕೃಷ್ಣ ಭಕ್ತರು !
ಎಲ್ಲರೂ ಶ್ರೀಕೃಷ್ಣನನ್ನು ನೆನೆಯುತ್ತಾರೆ. ಆದರೆ, ಶ್ರೀಕೃಷ್ಣ ಎಂದೂ ಕೊಳಲನ್ನು ಬಿಟ್ಟು ಇರುತ್ತಿರಲಿಲ್ಲ. ಆದರೆ ಇಂದಿನ ಆಧುನಿಕ ದಿನಮಾನದ ಭರಾಟೆಯಲ್ಲಿ ಕೃಷ್ಣದ ಆಪ್ತನಂತಿದ್ದ ಕೊಳಲನ್ನು ಮರೆಯುತ್ತಿರುವುದು ಖೇದಕರ ಎಂದು ಸಚಿವ ಯು.ಟಿ. ಖಾದರ್ ತಿಳಿಸಿದರು.







