ಮುಂಗಾರು ಮಹಾಮಳೆಗೆ 1,400 ಜನರು ಮೃತ್ಯು: ಗೃಹ ಸಚಿವಾಲಯ

ಹೊಸದಿಲ್ಲಿ, ಸೆ. 3: ಮುಂಗಾರು ಋತುವಿನಲ್ಲಿ ಮಳೆ, ನೆರೆ ಹಾಗೂ ಭೂಕುಸಿತದಿಂದ ಕೇರಳದಲ್ಲಿ 488 ಜನರ ಸಹಿತ 10 ರಾಜ್ಯಗಳಲ್ಲಿ ಇದುವರೆಗೆ 1400ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಕೇರಳದಲ್ಲಿ ಸುರಿದ ಮಹಾಮಳೆಗೆ 488 ಜನರು ಮೃತಪಟ್ಟಿದ್ದಾರೆ ಹಾಗೂ 14 ಜಿಲ್ಲೆಗಳಲ್ಲಿ 54.11 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. 14.52 ಲಕ್ಷ ಜನರು ನಿರ್ವಸಿತರಾಗಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದುಕೊಂಡಿದ್ದರು. 57.024 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಸಚಿವಾಲಯದ ರಾಷ್ಟ್ರೀಯ ತುರ್ತು ಸ್ಪಂದನಾ ಕೇಂದ್ರ ತಿಳಿಸಿದೆ. ಉತ್ತರಪ್ರದೇಶದಲ್ಲಿ 254, ಪಶ್ಚಿಮಬಂಗಾಳದಲ್ಲಿ 210, ಕರ್ನಾಟಕದಲ್ಲಿ 170, ಮಹಾರಾಷ್ಟ್ರದಲ್ಲಿ 139, ಗುಜರಾತ್‌ನಲ್ಲಿ 52, ಅಸ್ಸಾಂನಲ್ಲಿ 50, ಉತ್ತರಾಖಂಡದಲ್ಲಿ 37, ಒರಿಸ್ಸಾದಲ್ಲಿ 29 ಹಾಗೂ ನಾಗಾಲ್ಯಾಂಡ್‌ನಲ್ಲಿ 11 ಜನರು ಮೃತಪಟ್ಟಿದ್ದಾರೆ.
ಒಟ್ಟು 43 ಜನರು ನಾಪತ್ತೆಯಾಗಿದ್ದಾರೆ. ಕೇರಳದಲ್ಲಿ 15, ಉತ್ತರಪ್ರದೇಶದಲ್ಲಿ 14, ಪಶ್ಚಿಮಬಂಗಾಳದಲ್ಲಿ 5, ಉತ್ತರಾಖಂಡದಲ್ಲಿ 6, ಕರ್ನಾಟಕದಲ್ಲಿ 3 ಜನರು ನಾಪತ್ತೆಯಾಗಿದ್ದಾರೆ. 386 ಜನರು ಗಾಯಗೊಂಡಿದ್ದಾರೆ. ಒರಿಸ್ಸಾದ 30, ಮಹಾರಾಷ್ಟ್ರದ 26, ಅಸ್ಸಾಂನ 25, ಉತ್ತರಪ್ರದೇಶದ 23, ಪಶ್ಚಿಮಬಂಗಾಳದ 23, ಕೇರಳದ 14, ಉತ್ತರಾಖಂಡದ 13, ಕರ್ನಾಟಕದ 11, ನಾಗಾಲ್ಯಂಡ್‌ನ 11 ಗುಜರಾತ್‌ನ 10 ಜಿಲ್ಲೆಗಳು ಸಂತ್ರಸ್ತವಾಗಿವೆ.
ಅಸ್ಸಾಂನಲ್ಲಿ 11.47 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ. 27,964 ಹೆಕ್ಟೇರ್ ಬೆಳೆಗೆ ಹಾನಿಯಾಗಿದೆ. ಪಶ್ಚಿಮಬಂಗಾಳದಲ್ಲಿ 2.28 ಜನರು ಸಂತ್ರಸ್ತರಾಗಿದ್ದಾರೆ. 48,552 ಹೆಕ್ಟೇರ್ ಬೆಳೆಗೆ ಹಾನಿಯಾಗಿದೆ.
ಉತ್ತರಪ್ರದೇಶದಲ್ಲಿ 3,42 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ ಹಾಗೂ 50,873 ಹೆಕ್ಟೇರ್ ಬೆಳೆಗೆ ಹಾನಿಯಾಗಿದೆ. ಕರ್ನಾಟಕದಲ್ಲಿ 3.5 ಲಕ್ಷ ಜನರು ಸಂತ್ರಸ್ತರಾಗಿದ್ದಾರೆ ಹಾಗೂ 3.521 ಹೆಕ್ಟೇರ್ ಬೆಳೆಗೆ ಹಾನಿಯಾಗಿದೆ.







