ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿದ ಭಾರತದ ಯುವ ಶಟ್ಲರ್‌ಗಳು

ಹೊಸದಿಲ್ಲಿ, ಸೆ.3: ಉಕ್ರೇನ್‌ನ ಖಾರ್ಕಿವ್‌ನಲ್ಲಿ ನಡೆದ ಆರ್‌ಎಸ್‌ಎಲ್ ಖಾರ್ಕಿವ್ ಇಂಟರ್‌ನ್ಯಾಶನಲ್ ಚಾಲೆಂಜ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾರತದ ಯುವ ಶಟ್ಲರ್‌ಗಳಾದ ಅನುಷ್ಕಾ ಪಾರಿಖ್ ಹಾಗೂ ಸೌರಭ್ ಶರ್ಮಾ ಹಾಗೂ ಕೃಷ್ಣಾ ಪ್ರಸಾದ್ ಗರ್ಗ್ ಹಾಗೂ ಧುೃವ್ ಕಪಿಲಾ ಕ್ರಮವಾಗಿ ಮಿಶ್ರ ಡಬಲ್ಸ್ ಹಾಗೂ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಎರಡನೇ ಶ್ರೇಯಾಂಕದ ಸೌರಭ್ ಹಾಗೂ ಅನುಷ್ಕಾ ಒಂದು ಗಂಟೆ, 3 ನಿಮಿಷಗಳ ಕಾಲ ನಡೆದ ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ಪೊಲೆಂಡ್‌ನ ಪಾವೆಲ್ ಸ್ಮೈಲೊಸ್ಕಿ ಹಾಗೂ ಮಗ್ಡಾನಾ ಸ್ವಿರ್ಝಿಂಸ್ಕಾರನ್ನು 18-21, 21-19, 22-20 ಅಂತರದಿಂದ ಸೋಲಿಸಿದ್ದಾರೆ.
36 ನಿಮಿಷಗಳ ಕಾಲ ನಡೆದ ಡಬಲ್ಸ್ ಫೈನಲ್‌ನಲ್ಲಿ ಕೃಷ್ಣಾ ಹಾಗೂ ಧುೃವ್ ಜರ್ಮನಿಯ ಡೇನಿಯಲ್ ಹೆಸ್ ಹಾಗೂ ಜೋನ್ಸ್ ಪಿಸ್ಟೋರಿಯಸ್‌ರನ್ನು 21-19, 21-16 ಅಂತರದಿಂದ ಮಣಿಸಿದ್ದಾರೆ. ಸ್ಪರ್ಧೆಯಲ್ಲಿರುವ ಭಾರತದ ಮಹಿಳೆಯರ ಡಬಲ್ಸ್ ಆಟಗಾರರಾದ ಸಿಮ್ರಾನ್ ಸಿಂಘಿ ಹಾಗೂ ರಿತಿಕಾ ಥಕರ್ ಸೆಮಿ ಫೈನಲ್‌ನಲ್ಲಿ ಸೋತಿದ್ದಾರೆ. ಅಗ್ರ ಶ್ರೇಯಾಂಕದ ಮಿಶ್ರ ಡಬಲ್ಸ್ ಜೋಡಿ ರೋಹನ್ ಕಪೂರ್ ಹಾಗೂ ಕುಹೂ ಗರ್ಗ್ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.