ರೈತ ಫಸಲ್ ಬಿಮಾ ಯೋಜನೆ ಹೆಸರಿನಲ್ಲಿ ಕೇಂದ್ರ ಸರಕಾರದಿಂದ ರೈತರಿಗೆ ವಂಚನೆ: ಈಶ್ವರ್ ಖಂಡ್ರೆ ಆರೋಪ
ಬೆಂಗಳೂರು, ಸೆ.4: ರೈತ ಫಸಲ್ ಬಿಮಾ ಯೋಜನೆ ಹೆಸರಿನಲ್ಲಿ ಕೇಂದ್ರ ಸರಕಾರ ರೈತರಿಗೆ ಮೋಸ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ಖಂಡ್ರೆ ಆರೋಪಿಸಿದ್ದಾರೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ ನಂತರದಲ್ಲಿ ದೇಶ ಕಂಡ ಅತಿ ದೊಡ್ಡ ವಂಚನೆ ಫಸಲ್ ಬಿಮಾ ಯೋಜನೆಯಾಗಿದೆ. ಕೇಂದ್ರ ಸರಕಾರ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಫಸಲ್ ಬಿಮಾ ಯೋಜನೆಯಿಂದ ರೈತರಿಗೆ ಅನುಕೂಲವಾಗಲಿದೆ. ದುಪ್ಪಟ್ಟು ಲಾಭ ಆಗಲಿದೆ ಎಂದು ಹೇಳಿ ಪ್ರಧಾನಿ ಜನರನ್ನ ವಂಚಿಸಿದ್ದಾರೆ ಎಂದು ದೂರಿದ್ದಾರೆ.
ಯುಪಿಎ ಸರಕಾರವಿದ್ದಾಗ ಅಗ್ರಿಕಲ್ಚರಲ್ ಕಾರ್ಪೊರೇಷನ್ ಮೂಲಕ ರೈತರಿಗೆ ಬೆಳೆ ವಿಮೆ ನೀಡಲಾಗುತ್ತಿತ್ತು. 2016- 17ರಲ್ಲಿ ಎನ್ಡಿಎ ಸರಕಾರ ಪ್ರಧಾನಮಂತ್ರಿ ರೈತ ಫಸಲ್ ಬಿಮಾ ಯೋಜನೆ ಜಾರಿಗೆ ತಂದಿತ್ತು. ರೈತರಿಗೆ ಅನುಕೂಲವಾಗುತ್ತದೆ, ಬೆಳೆ ಹಾನಿಗೆ ತಕ್ಷಣ ಪರಿಹಾರ ನೀಡಲಾಗುತ್ತದೆ ಎಂದು ಬಿಂಬಿಸಲಾಗಿತ್ತು. ಯೋಜನೆಯಿಂದ ಲಾಭವಾಗುತ್ತದೆ ಎಂದು ಭಾವಿಸಿದ್ದೆವು. ಆದರೆ, ಇದರ ಹಿಂದೆ ಕಾರ್ಪೊರೇಟ್ ಕಂಪನಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿತ್ತು ಎನ್ನುವುದು ತಿಳಿಯಲಿಲ್ಲ ಎಂದು ಅವರು ತಿಳಿಸಿದರು.
ಬೀದರ್ ಜಿಲ್ಲೆಯಲ್ಲಿ 2017-18ರಲ್ಲಿ ಈ ಒಂದು ಯೋಜನೆ ಅಡಿ 1,80,000 ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿದ್ದರು. ಇವರು ಒಟ್ಟು 14 ಕೋಟಿ 25 ಲಕ್ಷ ರೂ. ಪ್ರೀಮಿಯಂ ಕಂತು ಕಟ್ಟಿದ್ದಾರೆ. ಇದರಲ್ಲಿ ರೈತರ ಪಾಲು ಶೇ.2 ರಷ್ಟು, ಕೇಂದ್ರ ಹಾಗೂ ರಾಜ್ಯ ಸರಕಾರದ ಪಾಲು ತಲಾ 85 ಕೋಟಿ 99 ಲಕ್ಷ ರೂ. ಸೇರಿ ಒಟ್ಟು ಮೊತ್ತ 186 ಕೋಟಿ ರೂ. ಆದರೆ, ಇದರಲ್ಲಿ ರೈತರ ಕೈಸೇರಿದ್ದು, ಕೇವಲ 84 ಲಕ್ಷ ರೂ. ಉಳಿದ ಮೊತ್ತ 185 ಕೋಟಿ ರೂ. ಖಾಸಗಿ ವಿಮಾ ಕಂಪನಿಗಳಿಗೆ ಲಾಭ ಆಗಿದೆ ಎಂದು ಅವರು ಹೇಳಿದರು.