ಸೆ.5: ಬ್ರಾಂಡೆಡ್ ನೆಟ್ ವರ್ಕ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಉಚಿತ ಇಂಟರ್‌ನೆಟ್ ಸೇವೆ
ಬೆಂಗಳೂರು, ಸೆ.4: ರಾಜ್ಯದಲ್ಲೇ ಮೊದಲ ಬಾರಿಗೆ ನಗರದ ಬ್ರಾಂಡೆಡ್ ನೆಟ್ ವರ್ಕ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ‘ಶಿಕ್ಷಾ’ ಹೆಸರಿನ ಉಚಿತ ಇಂಟರ್ ನೆಟ್ ಸೇವೆ ಆರಂಭಿಸಲು ಮುಂದಾಗಿದೆ.
ಮಂಗಳವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪನಿಯ ಮುಖ್ಯಸ್ಥ ಅರುಣ್ ಚಕ್ರಪಾಣಿ ರಾವ್, ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಈ ಉಚಿತ ಇಂಟರ್‌ನೆಟ್ ಸೇವೆ ನೀಡಲಾಗುತ್ತಿದ್ದು, ಶಿಕ್ಷಕರ ದಿನಾಚರಣೆ ಅಂಗವಾಗಿ ಇಂದು(ಸೆ.5) ಸೇವೆಗೆ ಚಾಲನೆ ನೀಡಿ, ಸಾರ್ವಜನಿಕರಿಗೆ ಸಮರ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ಉಚಿತ ಸೇವೆಯಲ್ಲಿ ಅನಗತ್ಯ ವಿಷಯಗಳು ಪ್ರವೇಶಿಸದಂತೆ ತಂತ್ರಜ್ಞಾನ ಅಳವಡಿಸಲಾಗಿದೆ. ಹೀಗಾಗಲೇ 1.50 ಲಕ್ಷ ಗ್ರಾಹಕರು ಈ ಅಂತರ್‌ಜಾಲ ಸಂಪರ್ಕ ಬಳಸುತ್ತಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಇತರ ನಗರಗಳಲ್ಲಿ ಅಂದಾಜು 300ಕ್ಕೂ ಹೆಚ್ಚು ಕೇಬಲ್ ಆಪರೇಟರ್‌ಗಳ ಮೂಲಕ ಉಚಿತ ಇಂಟರ್ ನೆಟ್ ಸೇವೆ ಒದಗಿಸಲಾಗುತ್ತಿದೆ ಎಂದರು.
ಈ ಸೇವೆಯಲ್ಲಿ ಯಾವುದೇ ರೀತಿ ಆಕ್ಷೇಪಾರ್ಹ ಜಾಲ ತಾಣಗಳು ಹಾಗೂ ಅಶ್ಲೀಲ ಸಂಬಂಧಿ ಸೇವಾ ಸಂಪರ್ಕ ಲಭ್ಯವಾಗದಂತೆ ನೋಡಿಕೊಳ್ಳಲಾಗುವುದು. ಅಷ್ಟೇ ಅಲ್ಲದೆ, ಜನರ ಸಹಕಾರದೊಂದಿಗೆ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯನ್ನು ಕೈಗೊಳ್ಳುವುದು ನಮ್ಮ ಮೂಲ ಉದ್ದೇಶ ಎಂದು ತಿಳಿಸಿದರು.







