ಮಂಗಳೂರು: ನ್ಯಾಯಾಲಯ ಆವರಣದಲ್ಲಿ ವಿಚಾರಣಾ ಕೈದಿಗಳಿಂದ ವ್ಯಕ್ತಿಗೆ ಹಲ್ಲೆ

ಮಂಗಳೂರು, ಸೆ. 4: ಜಿಲ್ಲಾ ನ್ಯಾಯಾಲಯಕ್ಕೆ ವಿಚಾರಣೆಗೆಂದು ಬಂದ ಕೈದಿಗಳು ಮಂಗಳವಾರ ಹಳೇ ದ್ವೇಷದಿಂದ ನ್ಯಾಯಾಲಯದ ಆವರಣದಲ್ಲೇ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಗೊಳಗಾದವನನ್ನು ಇಲ್ಯಾಸ್ ಎಂದು ಗುರುತಿಸಲಾಗಿದೆ.
ನ್ಯಾಯಾಂಗ ಬಂಧನದಲ್ಲಿರುವ ಉಳ್ಳಾಲ ಟಾರ್ಗೆಟ್ ಗ್ರೂಪ್‌ನ ಫರಾಝ್, ನವಾಝ್, ಕೊಲೆ ಪ್ರಕರಣದ ಆರೋಪಿ ಸುಹೈಲ್ ಮೊದಲಾದವರು ಇಲ್ಯಾಸ್‌ಗೆ ಜೀವ ಬೆದರಿಕೆಯೊಡ್ಡಿ, ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಇಲ್ಯಾಸ್ ಪ್ರಕರಣವೊಂದರಲ್ಲಿ 2014ರಲ್ಲಿ ಜೈಲ್‌ನಲ್ಲಿದ್ದ. ಈ ಸಂದರ್ಭ ಟಾರ್ಗೆಟ್ ಗ್ರೂಪ್‌ನವರು ಹಾಗೂ ಇತರರು ಇಲ್ಯಾಸ್ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಇಲ್ಯಾಸ್ ಟಾರ್ಗೆಟ್ ಗ್ರೂಪ್ ವಿರುದ್ಧ ಬರ್ಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಇದೇ ವಿಚಾರದಲ್ಲಿ ದ್ವೇಷ ಭಾವನೆಯಿಂದ ಹೊಂದಿದ್ದ ಟಾರ್ಗೆಟ್ ಗ್ರೂಪ್ ಹಾಗೂ ಇತರ ಆರೋಪಿಗಳು ಸೇರಿಕೊಂಡು ತಾನು ವಿಚಾರಣೆಗೆಂದು ನ್ಯಾಯಾಲಯಕ್ಕೆ ಆಗಮಿಸಿದ್ದಾಗ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಇಲ್ಯಾಸ್ ದೂರು ನೀಡಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಬಂದರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





