‘ಒಸರ್’ ವಚನಕಾರರ ಪಡಿಯಚ್ಚು : ನಾಗೇಶ್ ಕಲ್ಲೂರ್

ಮಂಗಳೂರು, ಸೆ.4: ‘ಒಸರ್’ ಕೃತಿಕಾರರು ಶರಣ ಸಾಹಿತ್ಯ ರಚನೆ ಮಾಡಿದ ವಚನಕಾರರ ಪಡಿಯಚ್ಚಿನ ನೆಲೆಯಲ್ಲಿ ಸಂವೇದನೆ ನೀಡಿದ ಯುವ ಕವಿ ಎಂದು ಆಕೃತಿ ಪ್ರಕಾಶನದ ಕಲ್ಲೂರ್ ನಾಗೇಶ್ ಹೇಳಿದ್ದಾರೆ.
ಇತ್ತೀಚೆಗೆ ಮಂಗಳೂರು ಆಕಾಶವಾಣಿಯ ತುಳು ವಿಭಾಗದ ‘ಸ್ವರ ಮಂಟಮೆ’ ನೇರ ಪ್ರಸಾರದಲ್ಲಿ ಚೇತನ್ ವರ್ಕಾಡಿ ಅವರ ‘ಒಸರ್’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ಅವರ ಕವಿತೆಗಳು ತಳಸ್ಪರ್ಶಿ ಸಂವೇದನೆಯ ಗೊಂಚಲಾಗಿ ಸಾಮಾನ್ಯನೊಬ್ಬ ಸಾಹಿತ್ಯ ರಚಿಸಲು ಶಕ್ತ ಎನ್ನುವಂತೆ ಕೃತಿಕಾರರ ಸಾಧನೆ ಮೆಚ್ಚುವಂತಹದ್ದು. ಅನುಭವ ಮಂಟಪದಲ್ಲಿ ಅಂಬಿಗ ವೃತ್ತಿಯ, ಅಕ್ಕಿ ಆಯುವ ಶರಣರಿಂದ ವಚನ ರಚನೆಯಾಗಿ ಅದ್ಭುತ ಕೊಡುಗೆ ನೀಡಿದ್ದಾರೆ. ಚೇತನ್ ಕೂಡ ಆ ನೆಲೆಯಲ್ಲಿ ಕಾವ್ಯ ಸೃಷ್ಟಿಗೆ ತೊಡಗಿದ ಉದಯೋನ್ಮುಖ ಕವಿ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಅಶ್ವಿತ್ ಪೂಜಾರಿ ಲಾಲ್‌ಬಾಗ್, ತುಳು ಸಾಹಿತಿ ಮಹೇಂದ್ರನಾಥ ಸಾಲೆತ್ತೂರು, ಸದಾನಂದ ನಾರಾವಿ, ಚಂದ್ರಹಾಸ ಕಣಂತೂರು, ವಿಜಯಕುಮಾರ್ ಪಾವಳ, ಆಶಾದಿಲೀಪ್ ಸುಳ್ಯಮೆ, ಉಮೇಶ್ ನಾಯ್ಕಿ, ಪ್ರಶಾಂತ್ ಕಲ್ಲೂರ್ ಕೃತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.
ಕೃತಿಕಾರ ಚೇತನ್ ವರ್ಕಾಡಿ ಮಾತನಾಡಿ, ಅನುಭವ ಜನ್ಯ ಕವಿತೆ ರಚನೆಗೆ ಮುಂದಾಗಿ ಚೊಚ್ಚಲ ಕೃತಿಯಾಗಿ ಮೂಡಿ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಬಾಲಕೃಷ್ಣ ಶೆಟ್ಟಿ, ಲೋಕೇಶ್ ಪಾವಳ, ಸೀತಾರಾಮ ಬೇರಿಂಜ, ಸುಧಾಕರ ಕಲ್ಲೂರ್, ವಿ.ಕುಕ್ಯಾನ್ ಭಾಗವಹಿಸಿದ್ದರು.
ಕಾರ್ಯಕ್ರಮ ಮುಖ್ಯಸ್ಥೆ ಉಷಾಲತಾ ಸರಪಾಡಿ ಸ್ವಾಗತಿಸಿದರು. ಡಾ.ಸದಾನಂದ ಪೆರ್ಲ ನಿರೂಪಿಸಿ, ವಂದಿಸಿದರು. ಉದ್ಘೋಷಕರಾದ ಮೋಹಿನಿ ವಿಟ್ಲ, ತಾಂತ್ರಿಕ ವಿಭಾಗದ ರಾಧಾ ಪ್ರಭಾಕರನ್, ಶ್ರೀಪತಿ ಭಟ್, ಜ್ಞಾನಾನಂದ ಕೋಡಿಕಲ್, ಚಂದ್ರಶೇಖರ್ ಪಾಣಾಜೆ ಮತ್ತಿತರರಿದ್ದರು.







