ಶಿಕ್ಷಣ ರಾಷ್ಟ್ರದ ಅಭಿವೃದ್ದಿಯ ಅಳತೆಗೋಲು: ಸಚಿವ ಎಸ್.ಆರ್ ಶ್ರೀನಿವಾಸ್
ದಾವಣಗೆರೆ, ಸೆ.5: ಯಾವುದೇ ಒಂದು ರಾಷ್ಟ್ರದ ಅಭಿವೃದ್ದಿಯ ಅಳತೆಗೋಲು ಶಿಕ್ಷಣವಾಗಿದ್ದು, ಶಿಕ್ಷಕರಿರುವ ದೇಶ ತನ್ನಂತಾನೇ ಅಭಿವೃದ್ದಿಯಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್ ಶ್ರೀನಿವಾಸ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್ ದಾವಣಗೆರೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ವತಿಯಿಂದ ಆಯೋಜಿಸಲಾಗಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನೋತ್ಸವ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಒಬ್ಬ ಶಿಕ್ಷಕರಾಗಿದ್ದ ರಾಧಾಕೃಷ್ಣನ್ ನವರು ಭಾರತದ ರಾಷ್ಟ್ರಪತಿ ಹುದ್ದೆಗೇರುವುದಕ್ಕೆ ಅವರಲ್ಲಿದ್ದ ಶಿಕ್ಷಣ ವೃತ್ತಿಯ ಅಂಶಗಳೇ ಕಾರಣ. ಸದಾ ಶಿಕ್ಷಣ ಪ್ರೇಮಿಯಾಗಿದ್ದ ರಾಧಕೃಷ್ಣನ್ ಅವರು ನೈತಿಕ ಹಾಗೂ ಮೌಲ್ಯಯುತ ಶಿಕ್ಷಣಕ್ಕೆ ದುಡಿಯುತ್ತಿದ್ದ ಒಬ್ಬ ಶಿಕ್ಷಣ ಪ್ರೇಮಿ. ಇಂದಿಗೂ ಶಿಕ್ಷಣ ಕ್ಷೇತ್ರದಲ್ಲಿ ಪಾವಿತ್ರ್ಯತೆ ಉಳಿದಿದೆ ಎಂದರೆ ರಾಧಕೃಷ್ಣನ್ ರಂತಹ ಹಲವು ಮಹನೀಯ ಶಿಕ್ಷಕರ ಆದರ್ಶಗಳೇ ಕಾರಣ ಎಂದರು.
ಇಂದು ಸರ್ಕಾರಿ ಶಾಲೆ ಉಳಿಸಿ ಎಂದು ಕೇಳಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಮೆರಿಟ್ ಆಧಾರದಲ್ಲಿ ಆಯ್ಕೆಯಾದ ಉತ್ತಮ ಶಿಕ್ಷಕರುಗಳಿರುತ್ತಾರೆ. ಆದರೂ ಪೋಷಕರೂ ಹೆಚ್ಚು ಡೋನೇಷನ್ ಪಡೆಯುವ ಶಾಲೆಗಳತ್ತಲೇ ಒಲವು ತೊರುತ್ತಿರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ಶಿಕ್ಷಕರು ಉತ್ತಮ ಶಿಕ್ಷಣ ನೀಡುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಲು ಶ್ರಮಿಸಬೇಕಾಗಿದೆ ಎಂದರು.
ಜಿಲ್ಲಾಧಿಕಾರಿ ಡಿ.ಎಸ್ ರಮೇಶ್, ಶಾಸಕ ಎಸ್.ಎ ರವೀಂದ್ರನಾಥ, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮಹಾಪೌರ ಶೋಭಾ ಪಲ್ಲಾಗಟ್ಟೆ, ಜಿ.ಪಂ ಸದಸ್ಯರಾದ ಬಸವರಾಜಪ್ಪ, ತೇಜಸ್ವಿ ಪಟೇಲ್ ಜಿ.ಪಂ ಉಪಾಧ್ಯಕ್ಷ ರಶ್ಮಿ ರಾಜಪ್ಪ, ತಾ.ಪಂ ಅಧ್ಯಕ್ಷ ಮಮತಾ ಮಲ್ಲೇಶಪ್ಪ, ಜಿ.ಪಂ ಸಿ.ಇ.ಓ.ಅಶ್ವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಚೇತನ್, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಅಪಾರ ಶಿಕ್ಷಕರ ಬಂಧುಗಳು ಸೇರಿದ್ದರು.