ಪ್ರಸಿದ್ಧ ವ್ಯಂಗ್ಯಚಿತ್ರಕಾರ ಪಿ.ಮುಹಮ್ಮದ್ ರಿಗೆ ಪ್ರತಿಷ್ಠಿತ ‘ಪೆನ್-ಗೌರಿ ಲಂಕೇಶ್ ಅವಾರ್ಡ್’

ಬೆಂಗಳೂರು, ಸೆ. 5: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ವರ್ಷವಾದ ಬುಧವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಪ್ರಜಾಪ್ರಭುತ್ವದ ಆದರ್ಶವಾದ’ಕ್ಕೆ ನೀಡುವ ಮೊದಲ ಪೆನ್-ಗೌರಿ ಲಂಕೇಶ್ ಪ್ರಶಸ್ತಿಯನ್ನು ಹಿರಿಯ ವ್ಯಂಗ್ಯಚಿತ್ರಕಾರ ಪಿ. ಮುಹಮ್ಮದ್ ಅವರಿಗೆ ನೀಡಿ ಗೌರವಿಸಲಾಯಿತು. ಗೌರಿ ಲಂಕೇಶ್ ಅವರ ಸಮಾನತೆ, ನ್ಯಾಯದ ಕುರಿತ ಬದ್ಧತೆ, ನಿರ್ಭೀತತೆ ಹಾಗೂ ಇದೆಲ್ಲದಕ್ಕಿಂತ ಮಿಗಿಲಾಗಿ ಅಭಿವ್ಯಕ್ತಿ ಸ್ವಾತಂತ್ರವನ್ನು ಪ್ರತಿಪಾದಿಸಿರುವುದನ್ನು ಈ ಪ್ರಶಸ್ತಿ ಪ್ರತಿನಿಧಿಸುತ್ತದೆ.
ಮೊದಲ ಪ್ರಶಸ್ತಿಗೆ ವ್ಯಂಗ್ಯಚಿತ್ರಕಾರ ಭಾಜನವಾಗಿರುವುದು ಪ್ರಮುಖ ವಿಚಾರ. ವ್ಯಂಗ್ಯ ಚಿತ್ರ ಮಾಡಿರುವ ಕಾರಣಕ್ಕೆ ವ್ಯಂಗ್ಯಚಿತ್ರಕಾರ ಜಿ. ಬಾಲಾ ಹಾಗೂ ಸತೀಶ್ ಆಚಾರ್ಯ ಬಂಧಿತರಾಗಿದ್ದಾರೆ ಅಥವಾ ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ.
ಪಿ. ಮುಹಮ್ಮದ್ ಅವರು ತಮ್ಮ ಹೆಚ್ಚಿನ ವ್ಯಂಗ್ಯ ಚಿತ್ರಗಳಲ್ಲಿ ಸಾಮಾಜಿಕ ಹಾಗೂ ಆರ್ಥಿಕ ನ್ಯಾಯ ಪ್ರತಿಪಾದಿಸಿದ್ದಾರೆ. ಅವರು ಈ ಹಿಂದೆ ಕನ್ನಡ ವಾರ ಪತ್ರಿಕೆ ತರಂಗ, ಇಂಗ್ಲಿಷ್ ದಿನ ಪತ್ರಿಕೆಗಳಾದ “ದಿ ಗಾರ್ಡಿಯನ್ ಆಫ್ ಬ್ಯುಸಿನಸ್ ಆ್ಯಂಡ್ ಪೊಲಿಟಿಕ್ಸ್”, ಆಂಧ್ರಪ್ರದೇಶ ಟೈಮ್ಸ್, ಕನ್ನಡ ದಿನಪತ್ರಿಕೆಗಳಾದ ಮುಂಗಾರು, ಜನವಾಹಿನಿ, ಪ್ರಜಾವಾಣಿ ಹಾಗೂ ವಿಜಯಕರ್ನಾಟಕದಲ್ಲಿ ವ್ಯಂಗ್ಯಚಿತ್ರಕಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
ದೇಶದ, ಮುಖ್ಯವಾಗಿ ಕರ್ನಾಟಕದ ರಾಜಕೀಯ ಭ್ರಷ್ಟಾಚಾರ, ಕೋಮವಾದ ಹಾಗೂ ಜಾತಿ ಪೂರ್ವಾಗ್ರಹಗಳ ಬಗ್ಗೆ ಅವರು ಯಾವುದೇ ಪಕ್ಷಪಾತವಿಲ್ಲದೆ ತಮ್ಮ ವ್ಯಂಗ್ಯಚಿತ್ರಗಳಲ್ಲಿ ವಿಡಂಬನೆ ಮಾಡಿದ್ದಾರೆ.
ಅವರು ಅಯೋಧ್ಯೆ ವಿವಾದದ ಬಗೆಗಿನ ವ್ಯಂಗ್ಯಚಿತ್ರಗಳ ಪುಸ್ತಕ, ವ್ಯಂಗ್ಯ (ವಿ)ಚಿತ್ರ ಹೆಸರಿನ ರಾಜಕೀಯ ವ್ಯಂಗ್ಯಚಿತ್ರಗಳ ಸಂಕಲನವನ್ನು ಹೊರ ತಂದಿದ್ದಾರೆ. 1993ರಲ್ಲಿ ನಡೆದ ‘ಕಾರ್ಟೂನಿಸ್ಟ್ ಎಗೈನ್‌ಸ್ಟ್ ಕಮ್ಯೂನಿಲಿಸಂ’ ಕುರಿತ ಸಹಮತ್ ಶಿಬಿರದಲ್ಲಿ ಪಾಲ್ಗೊಂಡಿದ್ದರು.







