ಆ.3ರ ಬೂದಿ ಮಳೆಯಲ್ಲಿದ್ದಿದ್ದು ಶೇ.71ರಷ್ಟು ಹಾರುಬೂದಿ: ಎನ್‌ಐಟಿಕೆ ಪ್ರಯೋಗಾಲಯ ಪರೀಕ್ಷೆಯಿಂದ ಬಹಿರಂಗ

ಉಡುಪಿ, ಸೆ.5: ಕಳೆದ ಆ.3ರ ಸಂಜೆಯ ವೇಳೆ ಉಡುಪಿ ಪರಿಸರದಲ್ಲಿ ಬಿದ್ದ ಮಳೆಯಲ್ಲಿದ್ದ ಬಿಳಿ-ಬೂದು ಬಣ್ಣದ ವಸ್ತು ಬೂದಿ ಎಂಬುದನ್ನು ಮಣಿಪಾಲದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೋರಿಕೆಯ ಮೇರೆಗೆ ತಮ್ಮ ಪ್ರಯೋಗಾಲಯದಲ್ಲಿ ಮಳೆ ನೀರಿನ ಸ್ಯಾಂಪಲ್‌ನ್ನು ಪರೀಕ್ಷಿಸಿದ ಸುರತ್ಕಲ್‌ನ ಎನ್‌ಐಟಿಕೆ ಕೆಮಿಕಲ್ ಇಂಜಿನಿಯರಿಂಗ್ ವಿಭಾಗ ನೀಡಿದ ವಿಶ್ಲೇಷಣಾ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.
ಇಂದಿಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಉಡುಪಿಯ ಪ್ರಸಿದ್ಧ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ರಾಜಾರಾಮ್ ತಲ್ಲೂರು ಅವರು ಮಾಹಿತಿ ಹಕ್ಕು ಕಾನೂನಿನಡಿ ಅರ್ಜಿ ಸಲ್ಲಿಸಿ ಪಡೆದುಕೊಂಡ ಎನ್‌ಐಟಿಕೆಯ ರಾಸಾಯನಿಕ ತಜ್ಞರು ನೀಡಿದ ವಿಶ್ಲೇಷಣಾ ವರದಿಯ ಆಧಾರದಲ್ಲಿ ಈ ವಿಷಯ ತಿಳಿಸಿದರು.
ಆ.3ರಂದು ಸಂಜೆ ಬಿದ್ದ ಮಳೆ ನೀರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಸಂಗ್ರಹ ಮಾಡಿ ನೀಡಿದ ಸ್ಯಾಂಪಲ್‌ನಲ್ಲಿ (ಮಾದರಿ) ಬೂದಿಯ ಅಂಶ ಶೇ.71.43 ರಷ್ಟಿತ್ತು. ಉಳಿದಂತೆ ಶೇ.12.51ರಷ್ಟು ಫಿಕ್ಸೆಡ್ ಕಾರ್ಬನ್(ಮಸಿ), ಶೇ.10.92 ರಷ್ಟು ಆವಿಯಾಗಬಲ್ಲ ರಾಸಾಯನಿಕಗಳು ಹಾಗೂ ಶೇ.5.09ರಷ್ಟು ತೇವಾಂಶ ಸೇರಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ತಜ್ಞರ ವರದಿಯನ್ನು ಪತ್ರಕರ್ತರೆದುರು ತೆರೆದಿಟ್ಟ ಡಾ.ಪಿ.ವಿ.ಭಂಡಾರಿ ಮಾತನಾಡಿ, ಕೊಡಗು ಮತ್ತು ಕೇರಳಗಳಲ್ಲಿ ಮಾನವ ನಿರ್ಮಿತ ದುರಂತಗಳ ಅಗಾಧತೆಯನ್ನು ನಾವು ಕಣ್ಣಾರೆ ಕಂಡಿದ್ದೇವೆ. ಈ ಹಿನ್ನೆಲೆಯಲ್ಲಿ ಜನರು ಪರಿಸರ ನಾಶ, ಪರಿಸರ ಮಾಲಿನ್ಯ ಚಟುವಟಿಕೆಗಳ ಕುರಿತು ಈಗಲೇ ಎಚ್ಚೆತ್ತುಕೊಳ್ಳಬೇಕು. ಉಡುಪಿ ಸೇರಿದಂತೆ ಅನೇಕ ಕಡೆಗಳಲ್ಲಿ ಆ. 3-4ರಂದು ಬಿದ್ದ ಬೂದಿ ಮಿಶ್ರಿತ ಮಳೆಯ ಕುರಿತಂತೆ ಜನರು ಈಗಲೇ ಎಚ್ಚೆತ್ತು ಕೊಳ್ಳದಿದ್ದರೆ ಮುಂದೆ ಅಪಾಯ ಕಾದಿದೆ ಎಂಬುದರ ಮುನ್ಸೂಚನೆಯಾಗಿದೆ ಎಂದರು.
ಉಡುಪಿಯಲ್ಲಿ ಬಿದ್ದ ಬೂದಿ ಮಳೆ ಪ್ರಕರಣ ನಮ್ಮ ಸುತ್ತಮುತ್ತಲಿರುವ ಕೈಗಾರಿಕೆಗಳು ನಮ್ಮ ಪರಿಸರವನ್ನು ಹಾನಿ ಮಾಡುವ ಸಾಧ್ಯತೆಗಳ ಎಲ್ಲಾ ಚಿಹ್ನೆಗಳನ್ನು ಸ್ಪಷ್ಟವಾಗಿ ತೋರಿಸುತ್ತಿವೆ ಎಂದವರು ವಿಶ್ಲೇಷಿಸಿದರು. ಒಬ್ಬ ವೈದ್ಯನಾಗಿ ಇಲ್ಲಿನ ಮನುಷ್ಯರ ಆರೋಗ್ಯ ಹಾಗೂ ಪ್ರಾಣಿ-ಸಸ್ಯಗಳ ಮೇಲಾ ಗುವ ಪರಿಣಾಮಗಳನ್ನು ಹಗುರವಾಗಿ ಪರಿಗಣಿಸಲು ತನಗೆ ಸಾಧ್ಯವಿಲ್ಲ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಕೊಂಡು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಬದುಕುವ ಹಕ್ಕು ಕೊಡಿ
ಕರಾವಳಿ ಮೂರು ಜಿಲ್ಲೆಗಳಲ್ಲಿ ಎಂಡೋಸಲ್ಫಾನ್ ಸಮಸ್ಯೆ ಎಷ್ಟೊಂದು ಭೀಕರವಾಗಿದೆ ಎಂಬುದನ್ನು ನಾವು ನೋಡಿದ್ದೇವೆ. ಸರಕಾರ ಅವರಿಗೆ ಪ್ಯಾಕೇಜ್ ಕೊಟ್ಟು ಕೈತೊಳೆದುಕೊಂಡಿದೆ. ಮುಂದೆ ಹಾರುಬೂದಿಯ ವಿಷಯದಲ್ಲಿ ಇಂತಹದೇ ಸನ್ನಿವೇಶ ಪುನರಾವರ್ತನೆಯಾಗದಿರಲಿ ಎಂಬುದೇ ತಮ್ಮ ಆಶಯವಾಗಿದೆ. ಸರಕಾರ ಜನರಿಗೆ ಬದುಕುವ ಹಕ್ಕನ್ನು ನೀಡಬೇಕೇ ಹೊರತು ಬದುಕಲಾಗದ ಅಭಿವೃದ್ಧಿ ಬೇಡ ಎಂದು ಅವರು ಡಾ. ಭಂಡಾರಿ ನುಡಿದರು.
ಜನರು ಮಾತನಾಡಬೇಕು
ಮೈ ಮೇಲೆ ಮೇಲಿನಿಂದ ಬೂದಿ ಉದುರಿರುವಾಗಲೂ ಜಿಲ್ಲೆಯ ಜನತೆ ಮಾತನಾಡದಿದ್ದರೆ, ನಮ್ಮ ನಾಗರಿಕ ಜವಾಬ್ದಾರಿಗಳಿಗೆ ನಾವೇ ಅಪಚಾರ ಮಾಡಿದಂತಾಗುತ್ತದೆ ಎಂದು ಹೇಳಿದ ರಾಜಾರಾಮ್ ತಲ್ಲೂರು, ಈ ವಿಚಾರದಲ್ಲಿ ಜಿಲ್ಲಾಡಳಿತ, ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಇಲಾಖೆಗಳು ತುರ್ತಾಗಿ ಕ್ರಮಕೈಗೊಂಡು ನಾಗರಿಕರ ರಕ್ಷಣೆಗೆ ಮುಂದಾಗಬೇಕು. ಇಲ್ಲದಿದ್ದರೆ ಈ ಕುರಿತು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸುವುದು ಅನಿವಾರ್ಯವಾಗಬಹುದು ಎಂದು ಎಚ್ಚರಿಸಿದರು.
‘ಆ.3ರ ಬೂದಿ ಮಳೆಗೆ ಇಂತಹವರೇ ಅಥವಾ ಇದೇ ಕಾರಣ ಎಂದು ನಾವು ಬೊಟ್ಟು ಮಾಡುವುದಿಲ್ಲ. ಆದರೆ ಇದು ಯಾರಿಂದಾಗಿ ಆಯಿತು ಎಂಬುದನ್ನು ಪತ್ತೆ ಹಚ್ಚಿ ಸಾರ್ವಜನಿಕರ ಗಮನಕ್ಕೆ ತರಬೇಕು ಹಾಗೂ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಜಿಲ್ಲಾಡಳಿತದ ಮೇಲಿದೆ ಎಂದು ರಾಜಾರಾಂ ತಲ್ಲೂರು ನೆನಪಿಸಿದರು.
ಬೂದಿಯಲ್ಲಿರುವುದು ಕ್ಯಾನ್ಸರ್‌ಕಾರಕ ವಸ್ತುಗಳು
ಆ. 3ರಂದು ಬಿದ್ದ ಬೂದಿ ಮಳೆಯಲ್ಲಿ ಇರುವುದು ಶೇ.71.42ರಷ್ಟು ಬೂದಿ ಎಂದು ಎನ್‌ಐಟಿಕೆಯ ತಜ್ಞರು ಪ್ರಯೋಗಾಲಯದ ಪರೀಕ್ಷೆ ಬಳಿಕ ಖಚಿತ ವಾಗಿರುವುದರಿಂದ ಇದು ಕಲ್ಲಿದ್ದಲು ಉರಿಸಿದಾಗ ಬರುವ ಹಾರು ಬೂದಿ ಎಂಬುದು ಸ್ಪಷ್ಟವಾಗಿದೆ. ಈ ಬೂದಿಯಲ್ಲಿ ಹರಳುಗಟ್ಟಿದ ಅಥವಾ ಹರಳುಗಟ್ಟದ ಸಿಲಿಕಾ (ಮರಳು), ಅಲ್ಯುಮೀನಿಯಂ ಆಕ್ಸೈಡ್, ಕ್ಯಾಲ್ಸಿಯಂ ಆಕ್ಸೈಡ್ ಅಲ್ಲದೇ ಸ್ವಲ್ಪ ಪ್ರಮಾಣದ ಆರ್ಸೆನಿಕ್, ಬೆರಿನಿಯಂ, ಬೊರಾನ್, ಕ್ಯಾಡ್ಮಿಯಂ, ಕೋರಿಯಂ, ಕೋಬಾಲ್ಡ್, ಸೀಸ, ಮ್ಯಾಂಗನೀಸ್, ಪಾದರಸ, ಸೆಲಿನಿಯಂ, ಥಾಲಿಯಂ, ವಾನಾಡಿಯ ಇತ್ಯಾದಿ ಲೋಹಗಳ ಅಂಶಗಳು, ವಿಷಕಾರಿ ರಾಸಾಯನಿಕಗಳು ಇರಬಹುದು.
ಇವುಗಳು ಚರ್ಮಕ್ಕೆ ತಾಗಿದಾಗ ಚರ್ಮದ ಕಿರಿಕಿರಿ, ತುರಿಕೆ, ಶ್ವಾಸಕೋಶದ ತೊಂದರೆಗಳು ಕಾಣಿಸಿಕೊಳ್ಳಬಹುದು. ಮೇಲಿನ ರಾಸಾಯನಿಕಗಳು ಕ್ಯಾನ್ಸರ್‌ಕಾರಕವಾಗಿದೆ ಎಂದು ತಜ್ಞರು ಈಗಾಗಲೇ ಕಂಡುಕೊಂಡಿದ್ದಾರೆ. ಈ ಬಗ್ಗೆ ಪರಿಸರ ಮಾಲಿನ್ಯ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಹೆಚ್ಚಿನ ತನಿಖೆ ನಡೆಸಿ ಕಾರಣ ಪತ್ತೆ ಹಚ್ಚಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜಾರಾಂ ಒತ್ತಾಯಿಸಿದರು.
ಪರಿಶೀಲಿಸಿ ಕ್ರಮ: ಎಡಿಸಿ ವಿದ್ಯಾ
ಎನ್‌ಐಟಿಕೆ ವರದಿ ಕುರಿತು ತನಗೆ ಯಾವುದೇ ಮಾಹಿತಿ ಇಲ್ಲ. ವರದಿಯ ಅಧ್ಯಯನ ನಡೆಸಿ ಜಿಲ್ಲಾಧಿಕಾರಿ ಅವರು ಮರಳಿದ ಬಳಿಕ ಅವರೊಂದಿಗೆ ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ತಿಳಿಸಿದರು.
ಬೂದಿಯಲ್ಲಿರುವುದು ಸಿಲಿಕಾನ್ (ಮರಳು) !
ಎನ್‌ಐಟಿಕೆಯ ತಜ್ಞರು ನೀಡಿರುವ ವರದಿಯಲ್ಲಿ ಹಾರುಬೂದಿಯ ಪ್ರಸ್ತಾಪವೇ ಇಲ್ಲ. ಅವರು ಉಲ್ಲೇಖಿಸಿರುವ ಬೂದಿಯಲ್ಲಿರುವುದು ಸಿಲಿಕಾನ್ (ಮರಳು) ಅಂಶ ಮಾತ್ರ. ಅದನ್ನು ಅವರು ತನಗೆ ತಿಳಿಸಿದ್ದಾರೆ. ಬೇಕಿದ್ದರೆ ಎನ್‌ಐಟಿಕೆಯ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರನ್ನು ವಿಚಾರಿಸಿ. ವರದಿಯ ಕುರಿತು ತಾನು ಈಗಾಗಲೇ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದ್ದೇನೆ.
- ಲಕ್ಷ್ಮೀಕಾಂತ್, ಪರಿಸರ ನಿಯಂತ್ರಣ ಅಧಿಕಾರಿ, ಉಡುಪಿ.







