ಆರ್ಸಿಬಿ ಕೋಚ್ ಆಗಿ ಆಶೀಷ್ ನೆಹ್ರಾ ಆಯ್ಕೆ
ಬೆಂಗಳೂರು, ಸೆ.5:ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ)ಫ್ರಾಂಚೈಸಿಯ ಹಾಲಿ ಬೌಲಿಂಗ್ ಕೋಚ್ ಆಶೀಷ್ ನೆಹ್ರಾ ಕೋಚ್ ಆಗಿ ಆಯ್ಕೆಯಾಗಿದ್ದು ಗ್ಯಾರಿ ಕರ್ಸ್ಟನ್ ರೊಂದಿಗೆ ಕೋಚಿಂಗ್ ನಾಯಕತ್ವ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ನೆಹ್ರಾ ಕಳೆದ ಋತುವಿನಲ್ಲಿ ಆರ್ಸಿಬಿಗೆ ಸೇರ್ಪಡೆಯಾಗಿದ್ದರು. ‘‘ಕಳೆದ ಋತುವಿನಲ್ಲಿ ಆರ್ಸಿಬಿ ಕೋಚಿಂಗ್ ತಂಡಕ್ಕೆ ಸೇರುವ ಅವಕಾಶ ಲಭಿಸಿತ್ತು. ಫ್ರಾಂಚೈಸಿಯ ನಾಯಕತ್ವ ಸ್ಥಾನಕ್ಕೆ ನನ್ನನ್ನು ಪರಿಗಣಿಸಿರುವ ಟೀಮ್ ಮ್ಯಾನೇಜ್ಮೆಂಟ್ಗೆ ಕೃತಜ್ಞತೆ ಸಲ್ಲಿಸುವೆ. ಮುಂಬರುವ ಋತುವಿನಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದೇನೆ’’ ಎಂದು ನೆಹ್ರಾ ಪ್ರತಿಕ್ರಿಯಿಸಿದರು. ನೆಹ್ರಾ ಎಲ್ಲ ಮೂರು ಮಾದರಿಯ ಕ್ರಿಕೆಟ್ನಲ್ಲಿ ಆಡಿದ್ದು ಭಾರತ ಎರಡು ಬಾರಿ ವಿಶ್ವಕಪ್ ಜಯಿಸಿದ್ದಾಗ ತಂಡದ ಭಾಗವಾಗಿದ್ದರು. ಎರಡು ಏಶ್ಯಾಕಪ್ ಹಾಗೂ ಮೂರು ಐಸಿಸಿ ಚಾಂಪಿಯನ್ಶಿಪ್ ಟೂರ್ನಿಗಳಲ್ಲೂ ಆಡಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್, ಮುಂಬೈ ಇಂಡಿಯನ್ಸ್, ಪುಣೆ ವಾರಿಯರ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಸಹಿತ ಹಲವು ಐಪಿಎಲ್ ತಂಡಗಳನ್ನು ನೆಹ್ರಾ ಪ್ರತಿನಿಧಿಸಿದ್ದಾರೆ. ‘‘ಕೋಚಿಂಗ್ ಲೀಡರ್ಶಿಪ್ ತಂಡದ ಭಾಗವಾಗಿ ಆಶೀಷ್ ನೆಹ್ರಾ ಆರ್ಸಿಬಿಗೆ ಸೇರ್ಪಡೆಯಾಗುತ್ತಿರುವುದಕ್ಕೆ ನಮಗೆ ತುಂಬಾ ಸಂತೋಷವಾಗುತ್ತಿದೆ. ಆಶೀಷ್ ಹಾಗೂ ಗ್ಯಾರಿ ನಾಯಕ ಕೊಹ್ಲಿಯೊಂದಿಗೆ ಸೇರಿಕೊಂಡು ತಂಡ ಉತ್ತಮ ಪ್ರದರ್ಶನ ನೀಡಲು ನೆರವಾಗಲಿದ್ದಾರೆ’’ಎಂದು ಆರ್ಸಿಬಿ ಚೇರ್ಮನ್ ಸಂಜೀವ್ ಚೂರಿವಾಲಾ ಹೇಳಿದ್ದಾರೆ.