ಪಾಂಡವಪುರ ವಿದ್ಯಾಹಂಸ ಭಾರತೀ ಸ್ವಾಮೀಜಿಯಿಂದ ಮಹಿಳೆಯ ಅತ್ಯಾಚಾರ: ಆರೋಪ
ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲು
ಮೈಸೂರು,ಸೆ.8: ಮಹಿಳೆ ಮೇಲೆ ಪಾಂಡವಪುರದ ಶ್ರೀವಿದ್ಯಾಹಂಸ ಭಾರತೀ ಸ್ವಾಮೀಜಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಂಡವಪುರದ ಮಹಾಕಾಳಿ ಚಕ್ರೇಶ್ವರಿ ತ್ರಿಧಾಮ ಕ್ಷೇತ್ರದ ಪೀಠಾಧ್ಯಕ್ಷ ವಿದ್ಯಾಹಂಸ ಭಾರತೀ ಸ್ವಾಮೀಜಿ ಚಾತುರ್ಮಾಸದ ಪೂಜೆಯ ವೇಳೆ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆಂಬ ಆರೋಪ ಕೇಳಿಬಂದಿದ್ದು, ನೊಂದ ಮಹಿಳೆ ಎಫ್‍ಐಆರ್ ದಾಖಲಿಸಿದ್ದಾರೆ.
ನಗರದ ಕೃಷ್ಣಮೂರ್ತಿಪುರಂನ ಶ್ರೀರಾಮಮಂದಿರದಲ್ಲಿ ಕಳೆದ ಒಂದು ತಿಂಗಳಿನಿಂದ ಚಾತುರ್ಮಾಸ ವ್ರತ ನಡೆಸುತ್ತಿದ್ದ ಸ್ವಾಮೀಜಿ ಸ್ಥಳದಿಂದ ಪರಾರಿ ಆಗಿದ್ದಾರೆ ಎನ್ನಲಾಗಿದೆ. ಮೈಸೂರಿನ ಕುವೆಂಪು ನಗರದ ನಿವಾಸಿ ರಾಜೇಶ್ ಬೋರೆ ಅವರ ಪತ್ನಿ ದೂರು ನೀಡಿದ್ದು, 'ಸ್ವಾಮೀಜಿ ಚಾತುರ್ಮಾಸ ಪೂಜೆಗೆಂದು ಮನೆಗೆ ಬಂದಾಗ ಅತ್ಯಾಚಾರ ನಡೆಸಿದ್ದಾರೆ. ಅವರಿಗೆ ತನ್ನ ಪತಿ ರಾಜೇಶ್ ಬೋರೆ ಸಹಕಾರ ನೀಡಿದ್ದಾರೆ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸೆ.4ರಂದು ರಾತ್ರಿ ಸುಮಾರು ಒಂದು ಗಂಟೆಯ ಸಮಯದಲ್ಲಿ ನನ್ನ ಗಂಡನ ಜೊತೆ ಸ್ವಾಮೀಜಿ ಮತ್ತು ಇತರೆ ಐದಾರು ಮಂದಿ ಒಳಗೆ ನುಗ್ಗಿದ್ದು, ನನ್ನ ಗಂಡ 'ಸ್ವಾಮೀಜಿಗೆ ನೀನು ಸಹಕರಿಸು, ನಮ್ಮ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ' ಎಂದು ನನಗೆ ಒತ್ತಾಯಿಸಿದರು. ಇದಕ್ಕೆ ಒಪ್ಪದಿದ್ದಾಗ ನನ್ನ ಗಂಡ ಮತ್ತು ಸ್ವಾಮೀಜಿ ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಲೈಂಗಿಕ ಕಿರುಕುಳ ನೀಡಿದ್ದು, ಪ್ರತಿರೋಧವೊಡ್ಡಿದಾಗ ಕಾರಿನಲ್ಲಿಯೇ ನನ್ನನ್ನು ಕುವೆಂಪುನಗರದಲ್ಲಿರುವ ಮೈದುನನ ಮನೆಗೆ ಕರೆದೊಯ್ದು ದಾರಿಯುದ್ದಕ್ಕೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಮೂರು ದಿನಗಳ ಒಳಗೆ ಸೇವೆಗೆ ಬರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದು, ಮಹಿಳೆಯ ದೂರು ದಾಖಲಿಸಿ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಕಳೆದ ತಡ ರಾತ್ರಿ ಎಫ್ಐಆರ್ ದಾಖಲಾಗುತ್ತಿದ್ದಂತೆ ಚಾತುರ್ಮಾಸದಿಂದ ಸ್ವಾಮೀಜಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.