ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಸದುಪಯೋಗಪಡಿಸಿ: ಸಂಸದ ದ್ರುವನಾರಯಣ್
ಹನೂರು,ಸೆ.9: ಗ್ರಾಮೀಣಾಭಿವೃದ್ದಿಗೆ ಹೆಚ್ಚು ಒತ್ತು ನೀಡುವ ಉದ್ದೇಶದಿಂದ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಅದರಲ್ಲಿ ಮಹತ್ತರ ಯೋಜನೆಯಾದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕೆಂದು ಸಂಸದ ಆರ್.ದ್ರುವನಾರಯಣ್ ತಿಳಿಸಿದರು
ಕ್ಷೇತ್ರ ವ್ಯಾಪ್ತಿಯ ಮಂಗಲ ದಿನ್ನಳ್ಳಿ, ಗಂಗನದೂಡ್ಡಿ, ಕುರುಬರದೊಡ್ಡಿ ಗ್ರಾಮಗಳಲ್ಲಿ ತಲಾ ಅಂದಾಜು 45 ಲಕ್ಷ ವೆಚ್ಚದಲ್ಲಿ ಪ್ರಧಾನಮಂತ್ರಿ ಆದರ್ಶ ಗ್ರಾಮ ಯೋಜನೆಯಡಿಯಡಿಯಲ್ಲಿ ಹಲವಾರು ಕಾಮಗಾರಿಗಳಿಗೆ ಶಿಲಾನ್ಯಾಸ ನೇರವೇರಿಸಿ ಮಾತನಾಡಿದ ಅವರು, ಆದರ್ಶ ಗ್ರಾಮ ಯೋಜನೆಗೆ ಹನೂರು ಕ್ಷೇತ್ರದ 7 ಗ್ರಾಮಗಳು ಆಯ್ಕೆಯಾಗಿದ್ದು, ಈ ಯೋಜನೆಯ ಮುಖಾಂತರ ಗ್ರಾಮಗಳ ರಸ್ತೆ, ಚರಂಡಿ, ಶುದ್ದ ಕುಡಿಯುವ ನೀರಿನ ಘಟಕ, ಬೀದಿ ದೀಪ ಅಳವಡಿಕೆ, ಶಾಲಾ ಕೊಠಡಿ ದುರಸ್ಥಿಗೆ ಹೆಚ್ಚು ಒತ್ತು ನೀಡಿ ಅಭಿವೃದ್ದಿಗೊಳಿಸಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ವರ್ಗಗಳ ಅಭಿವೃದ್ದಿಗಾಗಿಯೂ ಹೆಚ್ಚಿನ ಅನುದಾನ ನೀಡಲಾಗುತ್ತಿದ್ದು, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅಲ್ಪಸಂಖ್ಯಾತರಿಗೆ ಕೇವಲ 360 ಕೋಟಿ ನೀಡಿತ್ತು. ಆದರೆ ಸಿದ್ದರಾಮಯ್ಯರವರ ಕಾಂಗ್ರೆಸ್ ಸರ್ಕಾರ ನಿಗಮ ರಚಿಸಿ 3000 ಸಾವಿರ ಕೋಟಿ ನೀಡಿದೆ ಎಂದರು ತಿಳಿಸಿದರು.
ಶಾಸಕ ನರೇಂದ್ರ ರಾಜೂಗೌಡ ಮಾತನಾಡಿ ಎಸ್.ಇ.ಪಿ, ಟಿ.ಎಸ್.ಪಿಯಡಿ ಕೋಟ್ಯಾಂತರ ರೂ. ಅನುದಾನ ತಂದಿದ್ದು, ಈ ಭಾಗದಲ್ಲಿ ಸಾಕಷ್ಟು ಗ್ರಾಮಗಳು ಅಭಿವೃದ್ದಿಯಾಗಿದೆ. ವಿಧಾನಸಭಾ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಈ ಭಾಗದ ಜನರು ರಸ್ತೆ ಅಭಿವೃದ್ದಿಗೆ ಆಗ್ರಹಿಸಿದ್ದರು. ಅದರಂತೆ ಕಾಮಗಾರಿ ಪ್ರಾರಂಭವಾಗಿದ್ದು, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ ಎಂದರು.
ಈ ಸಂದರ್ಭ ಜಿಪಂ ಅಧ್ಯಕ್ಷೆ ಶಿವಮ್ಮ, ಸದಸ್ಯ ಬಸವರಾಜು, ತಾಲೂಕು ತಾಪಂ ಅಧ್ಯಕ್ಷ ರಾಜು, ಸದಸ್ಯರುಗಳಾದ ರಾಜೇಂದ್ರ, ಪಾರ್ವತಿಬಾಯಿ, ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹಮ್ಮದ್, ತಾಪಂ ಇಒ ಉಮೇಶ್, ಸಮಾಜ ಕಲ್ಯಾಣಾಧಿಕಾರಿ ಮಂಜುಳಾ, ಭೂಸೇನಾ ನಿಗಮ ಕಾರ್ಯಪಾಲಕ ಅಭಿಯಂತರರು ರಮೇಶ್, ದಿನ್ನಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಮೀರ್, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ, ಮುಖಂಡರಾದ ಪ್ರಭುಸ್ವಾಮಿ, ಶಿವಶಂಕರ್ ಇನ್ನಿತರರು ಹಾಜರಿದ್ದರು.