ಹನೂರು: ಶಾಸಕರಿಂದ ರಸ್ತೆ ಕಾಮಗಾರಿಯ ಪ್ರಗತಿ ಪರಿಶೀಲನೆ
ಹನೂರು,ಸೆ.10: ತಾಲೂಕಿನ ರಾಮಾಪುರದಿಂದ ದಿನ್ನಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯ ಪ್ರಗತಿ ಕಾರ್ಯವನ್ನು ಶಾಸಕ ಆರ್ ನರೇಂದ್ರರಾಜುಗೌಡ ಪರಿಶೀಲನೆ ನಡೆಸಿದರು.
ಶಾಸಕರು ದಿನ್ನಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭ ರಸ್ತೆ ಡಾಂಬರೀಕರಣಕ್ಕೆ ಬಳಸುವ ಜರ್ಮನ್ಯಂತ್ರ, ಮಿಕ್ಸಿಂಗ್ ಯಂತ್ರ, ಯುನಿಟ್ ಕೇಂದ್ರಗಳನ್ನು ಪರಿಶೀಲನೆ ನಡೆಸಿದರು. ಡಾಂಬರೀಕರಣದ ಗುಣಮಟ್ಟ ಆಳೆಯುವ ಮಾಪನ ಪರೀಕ್ಷಿಸಿ ಕಾಮಗಾರಿಯ ಕುರಿತು ಇಂಜಿನಿಯರ್ ಹಾಗೂ ಗುತ್ತಿಗೆದಾರರಿಂದ ಮಾಹಿತಿ ಪಡೆದು ನಿಗದಿತ ಸಮಯದಲ್ಲಿ ಪೂರ್ಣಗೂಳಿಸಲು ಸೂಚಿಸಿದರು.
ನಂತರ ಸುದ್ದಿಗಾರರೂಂದಿಗೆ ಮಾತನಾಡಿದ ಅವರು, ವಿಧಾನ ಸಭಾ ಚುನಾವಣೆ ಪ್ರಚಾರ ಸಂದರ್ಭ ಈ ಭಾಗದ ಜನರು ರಸ್ತೆ ಅಭಿವೃದ್ದಿಗೆ ಆಗ್ರಹಿಸಿದ್ದರು. ಆ ಸಂದರ್ಭ ನಾನು ರಾಮಾಪುರ ದಿನ್ನಳ್ಳಿ ಮಾರ್ಗ ರಸ್ತೆ ಕಾಮಗಾರಿ ಪ್ರಾರಂಭವಾಗುವ ತನಕ ನಿಮ್ಮೂರಿಗೆ ಕಾಲಿಡುವುದಿಲ್ಲ ಎಂದಿದ್ದೆ. ಅದರಂತೆ ಕಾಮಗಾರಿ ಪ್ರಾರಂಭವಾಗಿದ್ದು, ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ಇದು ಪ್ರಮುಖ ಜಿಲ್ಲಾ ರಸ್ತೆ (ಎಂ.ಡಿ.ಆರ್) ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿದೆ ಎಂದರು.
ಈ ಸಂದರ್ಭ ಸಂಸದ ಆರ್.ದ್ರವನಾರಯಣ್, ಜಿಪಂ ಅಧ್ಯಕ್ಷೆ ಶಿವಮ್ಮ ಕೃಷ್ಣ, ಸದಸ್ಯ ಬಸವರಾಜು, ತಾಪಂ ಅಧ್ಯಕ್ಷ ರಾಜು, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಜವಾದ್ ಅಹಮ್ಮದ್, ದಿನ್ನಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಮೀರ್, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ, ಮುಖಂಡರಾದ ಪ್ರಭುಸ್ವಾಮಿ, ಶಿವಶಂಕರ್ ಸೇರಿದಂತೆ ಗುತ್ತಿಗೆದಾರ ಅಪ್ಪಾದೊರೈ ನಟರಾಜು, ಇಂಜಿನಿಯರ್ ಸತೀಶ್ ಮುಂತಾದವರಿದ್ದರು.