ಹನೂರು: ತೈಲ ಬೆಲೆ ಏರಿಕೆ ಖಂಡಿಸಿ ಎಸ್ಡಿಪಿಐ, ದಸಂಸ ಪ್ರತಿಭಟನೆ
ಹನೂರು,ಸೆ.10: ಭಾರತ್ ಬಂದ್ ಬೆಂಬಲಿಸಿ ಕೌದಳ್ಳಿಯ ಮಲೈಮಹದೇಶ್ವರ ಬೆಟ್ಟದ ಮುಖ್ಯ ರಸ್ತೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಮತ್ತು ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.
ತೈಲ ಬೆಲೆ ನಿರಂತರ ಏರಿಕೆ ಖಂಡಿಸಿ ಎಸ್ಡಿಪಿಐ ಮತ್ತು ದಲಿತ ಸಂಘರ್ಷ ಸಮಿತಿ ಸದಸ್ಯರು, ಮ.ಮ ಬೆಟ್ಟದ ಮುಖ್ಯ ರಸ್ತೆಯಲ್ಲಿರುವ ಅಂಗಡಿ ಮಾಲಕರ ಮನವೊಲಿಸಿ ಬಾಗಿಲು ಮುಚ್ಚಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ನಂತರ ಹನೂರು ತಾಲೂಕು ಎಸ್ಡಿಪಿಐ ಅಧ್ಯಕ್ಷ ನೂರುಲ್ಲಾ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಆಡಳಿತಕ್ಕೆ ಬಂದು ಜನರ ದಿನ ಬಳಕೆ ವಸ್ತುಗಳ ಬೆಲೆಗಳು ಗಗನಕ್ಕೆ ಮುಟ್ಟಿದೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ದರ ದಿನದಿಂದ ದಿನಕ್ಕೆ ಏರಿ ಜನತೆ ಜೀವನ ನಡೆಸಲು ತೀವ್ರ ತೊಂದರೆ ಅನುಭವವಿಸುತ್ತಿದ್ದಾರೆ. ಈ ಕೂಡಲೇ ಕೇಂದ್ರ ಸರ್ಕಾರ ತೈಲ ದರ ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡ ಚಾನ್ಪಾಷ್, ದಲಿತ ಸಂಘರ್ಷ ಸಮಿತಿ ಪದಾಧಿಕಾರಿ ದೊರೈಸ್ವಾಮಿ ಸೇರಿ ಇನ್ನಿತರರು ಹಾಜರಿದ್ದರು.