ನಿಮ್ಮ ಕಿವಿಯಲ್ಲಿನ ಗುಗ್ಗೆಯ ಬಗ್ಗೆ ನಿಮಗೆಷ್ಟು ಗೊತ್ತು...?

ಕಿವಿಯಲ್ಲಿನ ಗುಗ್ಗೆ ನಮ್ಮ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಅದು ಮೃತ ಚರ್ಮ ಕೋಶಗಳು,ತೈಲ ಮತ್ತು ಇತರ ಕಣಗಳನ್ನು ಒಳಗೊಂಡಿರುತ್ತದೆ. ಅದು ಕಿವಿಯ ಕಾಲುವೆಯ ಚರ್ಮವನ್ನು ರಕ್ಷಿಸುವಲ್ಲಿ ನೆರವಾಗುವ ಜೊತೆಗೆ ಒಳಗಿವಿಯನ್ನು ತೇವವಾಗಿರಿಸುತ್ತದೆ ಮತ್ತು ಶಿಲೀಂಧ್ರ ಹಾಗೂ ಬ್ಯಾಕ್ಟೀರಿಯಾಗಳಂತಹ ಸೂಕ್ಷ್ಮಜೀವಿಗಳಿಂದ ಕಿವಿಗೆ ರಕ್ಷಣೆ ನೀಡುತ್ತದೆ. ಕ್ರಿಮಿಕೀಟಗಳು ಮತ್ತು ನೀರು ಕಿವಿಗಳನ್ನು ಪ್ರವೇಶಿಸುವುದನ್ನೂ ಗುಗ್ಗೆಯು ತಡೆಯುತ್ತದೆ.
ಆರೋಗ್ಯವಂತರಲ್ಲಿ ಇತರ ಯಾವುದೇ ನೆರವಿಲ್ಲದೆ ಕಿವಿಯ ಗುಗ್ಗೆಯನ್ನು ಸ್ವಚ್ಛಗೊಳಿಸಬಹುದಾಗಿದೆ. ಆದರೆ ವಯಸ್ಸಾದವರಲ್ಲಿ ಇದು ಕಠಿಣವಾಗಬಹುದು ಮತ್ತು ಗುಗ್ಗೆಯ ಸಂಗ್ರಹವು ಗಂಭೀರ ಆರೋಗ್ಯಸಮಸ್ಯೆಗಳಿಗೆ ಕಾರಣವಾಗಬಹುದು.
ಕಿವಿಗಳಲ್ಲಿ ನೋವು,ಕಿವಿ ತುಂಬಿದಂತೆ ಅನಿಸುವಿಕೆ, ಕೇಳುವುದಕ್ಕೆ ತೊಂದರೆ ಮತ್ತು ದಿನೇದಿನೇ ಈ ತೊಂದರೆ ಹೆಚ್ಚುತ್ತಿರುವುದು,ಕಿವಿಗಳಲ್ಲಿ ಗಂಟೆ ಮೊಳಗಿದ ಶಬ್ದ,ಕಿವಿಯಿಂದ ದುರ್ವಾಸನೆ ಬರುವುದು,ತುರಿಕೆ ಮತ್ತು ತಲೆ ಸುತ್ತುವಿಕೆ ಇವು ಕಿವಿಯಲ್ಲಿ ಗುಗ್ಗೆಯು ಆತಿಯಾಗಿ ಶೇಖರಗೊಂಡಿದೆ ಎಂದು ಸೂಚಿಸುವ ಸಾಮಾನ್ಯ ಲಕ್ಷಣಗಳಾಗಿವೆ.
ಕಿವಿ ಗುಗ್ಗೆ ಪರಿಣಾಮದ ಸಮಸ್ಯೆ ಅತ್ಯಂತ ಸಾಮಾನ್ಯವಾಗಿದೆ. ಯುವಜನರಿಗೆ ಹೋಲಿಸಿದರೆ ವಯಸ್ಸಾದವರು ಇದಕ್ಕೆ ಸುಲಭವಾಗಿ ಗುರಿಯಾಗುತ್ತಾರೆ. ಇಂತಹ ಸಮಸ್ಯೆ ತಮ್ಮನ್ನು ಕಾಡುತ್ತಿದೆ ಎನ್ನುವುದೂ ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ನಾವು ಸಣ್ಣವರಿದ್ದಾಗ ಹೋಲಿಸಿದರೆ ವಯಸ್ಸಾದಾಗ ಗುಗ್ಗೆಯು ಹೆಚ್ಚು ಒಣಗಿರುತ್ತದೆ ಮತ್ತು ಗಟ್ಟಿಯಾಗಿರುತ್ತದೆ. ಇದರ ಪ್ರಮಾಣ ಅತಿಯಾದರೆ ಕಿವಿ ಸರಿಯಾಗಿ ಕೇಳಿಸುವುದಿಲ್ಲ.
ಜೊತೆಗೆ ಶರೀರದ ಅಸಮತೋಲನ ಮತ್ತು ಒತ್ತಡ ಏರಿಕೆಯೂ ಇದರೊಂದಿಗೆ ಗುರುತಿಸಿಕೊಳ್ಳುತ್ತದೆ. ಶ್ರವಣ ಶಕ್ತಿ ನಷ್ಟಕ್ಕೂ ಡಿಮೆನ್ಶಿಯಾ ಹಾಗೂ ಅರಿವಿನ ಕೊರತೆಗೂ ಸಂಬಂಧವಿದೆ ಮತ್ತು ಕಿವಿಯಲ್ಲಿ ಅತಿಯಾಗಿ ಗುಗ್ಗೆಯಿದ್ದರೆ ಈ ಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.
ಅತಿಯಾದ ಗುಗ್ಗೆಯು ಮಿದುಳಿನ ಕಾರ್ಯ ನಿರ್ವಹಣೆಗೆ ವ್ಯತ್ಯಯವನ್ನುಂಟು ಮಾಡುತ್ತದೆ ಮತ್ತು ಮಾನಸಿಕತೆಯಲ್ಲಿ ದಿಢೀರ ಬದಲಾವಣೆಗಳಿಗೆ ಕಾರಣವಾಗುತ್ತದೆ. ನಮ್ಮ ಒಳಕಿವಿಗಳು,ಕಣ್ಣುಗಳು,ಸ್ನಾಯುಗಳು ಮತ್ತು ಕೀಲುಗಳು ಶರೀರದ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ನಮ್ಮ ಶರೀರದ ಈ ಅಂಗಗಳು ಮಿದುಳಿಗೆ ಸಂಕೇತಗಳನ್ನು ರವಾನಿಸುವ ಮತ್ತು ನಮ್ಮ ಶರೀರದ ಸಮತೋಲನವನ್ನು ಕಾಯ್ದುಕೊಳ್ಳಲು ನಮಗೆ ನೆರವಾಗುವ ನಮ್ಮ ಸಂವೇದನ ವ್ಯವಸ್ಥೆಯ ಭಾಗಗಳಾಗಿವೆ. ಈ ವ್ಯವಸ್ಥೆಯಿಲ್ಲದಿದ್ದರೆ ನಿಂತುಕೊಳ್ಳುವ,ಓಡುವ ಮತ್ತು ನಡೆದಾಡುವಂತಹ ಚಟುವಟಿಕೆಗಳನ್ನು ನಡೆಸಲು ನಮಗೆ ಕಷ್ಟವಾಗುತ್ತಿತ್ತು. ನೀವು ಸಮತೋಲನ ಸಮಸ್ಯೆಯನು ಎದುರಿಸುತ್ತಿದ್ದರೆ ವೈದ್ಯರನ್ನು ಕಾಣಬೇಕಾಗುತ್ತದೆ. ಆಡಿಯೊಲಾಜಿಸ್ಟ್ ಬಳಿಯೂ ನಿಮ್ಮ ಸಮತೋಲನವನ್ನು ತಪಾಸಣೆ ಮಾಡಿಸಿಕೊಳ್ಳಬಹುದು.







