ನನಗೆ ಬಿಜೆಪಿ ಸೇರಲು ಆಮಿಷವೊಡ್ಡಿದ್ದು ನಿಜ: ಕಾಂಗ್ರೆಸ್ ಶಾಸಕ ಸಿ.ಎಸ್ ಶಿವಳ್ಳಿ
ಐಟಿಗೆ ಕಾಂಗ್ರೆಸ್ ನಿಯೋಗದಿಂದ ದೂರು ದಾಖಲು

ಹುಬ್ಬಳ್ಳಿ, ಸೆ. 14: ‘ನನಗೆ ಬಿಜೆಪಿಯವರು ತಮ್ಮ ಪಕ್ಷಕ್ಕೆ ಸೇರುವಂತೆ ಕೇಳಿಕೊಂಡಿದ್ದು ನಿಜ. ಅವರು ನೀಡಲು ಮುಂದಾದ ಎಲ್ಲ ಭರವಸೆಗಳನ್ನು ನಾನು ತಳ್ಳಿ ಹಾಕಿದ್ದೇನೆ’ ಎಂದು ಧಾರವಾಡ ಜಿಲ್ಲೆ ಕುಂದಗೋಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಸಿ.ಎಸ್.ಶಿವಳ್ಳಿ ತಿಳಿಸಿದ್ದಾರೆ.
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಜೆಪಿಯವರು ಯಾವ ಭರವಸೆ ನೀಡಿದ್ದರು ಎನ್ನುವುದನ್ನು ನಾನು ಹೇಳುವುದಿಲ್ಲ. ನನಗೆ ರಾಜಕೀಯ ಜೀವನ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಹೀಗಾಗಿ ಯಾವುದೇ ಕಾರಣಕ್ಕೂ ನಾನು ಪಕ್ಷವನ್ನು ಬಿಟ್ಟು ಹೋಗುವ ಬಗ್ಗೆ ವಿಚಾರ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ನಾನು ಹಿಂ.ವರ್ಗದ ಹಿರಿಯ ಶಾಸಕನಾಗಿದ್ದು, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವೆ. ಈ ಕುರಿತು ಪಕ್ಷದ ನಾಯಕರಿಗೆ ಹಾಗೂ ಹೈಕಮಾಂಡ್‌ಗೆ ಒತ್ತಡ ಹೇರಿದ್ದು ನಿಜ. ಸಚಿವ ಸ್ಥಾನ ನೀಡಲಿಲ್ಲವೆಂದು ಪಕ್ಷ ಬಿಟ್ಟು ಹೋಗುವ ನಿರ್ಧಾರ ಕೈಗೊಂಡಿಲ್ಲ. ನನಗೆ ಇನ್ನೂ ವಯಸ್ಸಿದೆ, ಅವಕಾಶಗಳಿವೆ. ಮುಂದಿನ ಅವಧಿಯಲ್ಲಿ ಸಚಿವ ಸ್ಥಾನ ಸಿಗುತ್ತದೆ ಎನ್ನುವ ಭರವಸೆ ಇದೆ ಎಂದು ಅವರು ನುಡಿದರು.
ರಾಜ್ಯದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಸುಭದ್ರವಾಗಿದೆ. ಒಂದು ವೇಳೆ ಸರಕಾರ ಬೀಳಿಸಬೇಕೆಂದರೆ 14 ಮಂದಿ ಶಾಸಕರು ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಿ, ಜಯಗಳಿಸಿ ಬರುವುದು ಅಸಾಧ್ಯ. ಹೀಗಾಗಿ ಯಾರೊಬ್ಬರೂ ರಾಜೀನಾಮೆ ನೀಡಿ ಬಿಜೆಪಿ ಸೇರಲು ಮುಂದಾಗಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಐಟಿ ಇಲಾಖೆಗೆ ‘ಕೈ’ ದೂರು
‘ದೊಡ್ಡ ಮಟ್ಟದ ಹಣದ ಆಮಿಷದ ಮೂಲಕ ಬಿಜೆಪಿ ಆಪರೇಷನ್ ಕಮಲಕ್ಕೆ ಹುನ್ನಾರ ನಡೆದಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆ ಕಗ್ಗೊಲೆಗೆ ಬಿಜೆಪಿ ಮುಂದಾಗಿದೆ. ಕಾಂಗ್ರೆಸ್ ಪಕ್ಷದ ಶಾಸಕರಾದ ಸಿ.ಎಸ್.ಶಿವಳ್ಳಿ, ಬಿ.ಸಿ.ಪಾಟೀಲ್ ಸೇರಿದಂತೆ ನಾಲ್ಕೈದು ಮಂದಿಗೆ ಬಿಜೆಪಿ ಆಮಿಷವೊಡ್ಡಿದೆ. ಹೀಗಾಗಿ ಈ ಸಂಬಂಧ ಸಮಗ್ರ ತನಿಖೆ ನಡೆಸಬೇಕೆಂದು ಕೋರಿ ಐಟಿ ಡಿಜಿಗೆ ಕೆಪಿಸಿಸಿ ನಿಯೋಗ ದೂರು ನೀಡಿದೆ’
-ಈಶ್ವರ್ ಬಿ.ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ







