“ಗಿಡ್ಡ ಬಟ್ಟೆ ಧರಿಸಬಾರದು, ಮಾಂಸಾಹಾರದ ಕ್ಯಾಂಟೀನ್ ಮುಚ್ಚಬೇಕು”
ಜೆಎನ್‌ಯು ಕ್ಯಾಂಪಸ್ ನಲ್ಲಿ ಎಬಿವಿಪಿ ಪೋಸ್ಟರ್: ಆರೋಪ

ಹೊಸದಿಲ್ಲಿ, ಸೆ.14: ಜೆಎನ್‌ಯು (ಜವಾಹರಲಾಲ್ ನೆಹರೂ ವಿವಿ)ಯನ್ನು ದೇಶವಿರೋಧಿ ಕಾಮ್ರೇಡ್‌ಗಳಿಂದ ರಕ್ಷಿಸಲು ವಿವಿಯಲ್ಲಿ ಮಹಿಳೆಯರು ಗಿಡ್ಡ ಬಟ್ಟೆಗಳನ್ನು ಧರಿಸುವಂತಿಲ್ಲ ಮತ್ತು ಮಾಂಸಾಹಾರ ಪೂರೈಸುವ ಉಪಾಹಾರ ಗೃಹಗಳನ್ನು ಮುಚ್ಚಬೇಕು ಎಂಬ ಪೋಸ್ಟರ್‌ಗಳು ವಿವಿಯ ಆವರಣದಲ್ಲಿ ಕಂಡು ಬಂದಿದ್ದು, ಆರೆಸ್ಸೆಸ್ ಸಹಸಂಘಟನೆ ಎಬಿವಿಪಿ ಇದನ್ನು ಅಂಟಿಸಿದೆ ಎಂದು ಹೇಳಲಾಗಿದೆ.
ಆದರೆ ಇದನ್ನು ನಿರಾಕರಿಸಿರುವ ಎಬಿವಿಪಿ ಮುಖಂಡ ಸೌರಭ್ ಶರ್ಮ, ಎಡಪಕ್ಷಗಳಿಗೆ ನಮ್ಮ ಬಗ್ಗೆ ಭೀತಿಯಿದೆ. ನಮ್ಮ ಬಗ್ಗೆ ಅಪಪ್ರಚಾರ ಮಾಡಲು ಅವರೇ ಇದನ್ನು ಅಂಟಿಸಿದ್ದಾರೆ ಎಂದು ಹೇಳಿದ್ದಾರೆ.
ಜೆಎನ್‌ಯು ವಿದ್ಯಾರ್ಥಿ ಸಂಘದ ಮಹತ್ವದ ಹುದ್ದೆಗಳಿಗೆ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲೇ ಇಂತಹ ಪೋಸ್ಟರ್‌ಗಳು ಕಂಡು ಬಂದಿರುವುದು ಕುತೂಹಲಕಾರಿಯಾಗಿದೆ. ಪೋಸ್ಟರ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಕೇಂದ್ರ ಲೈಬ್ರೆರಿಯಲ್ಲಿ ಮಹಿಳೆಯರು ರಾತ್ರಿ ವೇಳೆ ಹೆಚ್ಚು ವೇಳೆ ಇರಬಾರದು, ಭಾರತೀಯ ಧಿರಿಸನ್ನು ಹೊರತುಪಡಿಸಿ ಇತರ ಗಿಡ್ಡ ಬಟ್ಟೆಗಳನ್ನು ಧರಿಸಬಾರದು, ಜನ್ಮದಿನ ಸಂಭ್ರಮಾಚರಣೆ ಸಲ್ಲದು, ಹುಡುಗರ ಹಾಸ್ಟೆಲ್‌ಗೆ ಹುಡುಗಿಯರು ಹೋಗುವಂತಿಲ್ಲ ಎಂಬ ನಿಯಮಗಳನ್ನು ಲೈಂಗಿಕ ದೌರ್ಜನ್ಯದ ಪ್ರಕರಣಗಳನ್ನು ನಿವಾರಿಸುವ ಸಲುವಾಗಿ ಕೈಗೊಳ್ಳುತ್ತಿದ್ದೇವೆ ಎಂದು ಪೋಸ್ಟರ್‌ಗಳಲ್ಲಿ ತಿಳಿಸಲಾಗಿದೆ.
ಜೆಎನ್‌ಯುವನ್ನು ಉಗ್ರರು ಮತ್ತು ದೇಶವಿರೋಧಿ ಕಾಮ್ರೇಡ್‌ಗಳಿಂದ ಸಂರಕ್ಷಿಸುವುದು, ಜೆಎನ್‌ಯು ಆವರಣದಲ್ಲಿ ಮಾಂಸಾಹಾರಿ ಖಾದ್ಯ ಒದಗಿಸುವ ಉಪಾಹಾರಗೃಹಗಳಿಗೆ ನಿಷೇಧ, ಜೆಎನ್‌ಯು ಕ್ಯಾಂಪಸ್‌ನಲ್ಲಿರುವ ‘ಎಡಪಂಥೀಯ ಮತ್ತು ಪೀಡಕರ’ ಅಡ್ಡೆಯಾಗಿರುವ ಗಂಗಾ ಧಾಬಾದ ಕಾರ್ಯನಿರ್ವಹಣೆಯ ಮೇಲೆ ನಿಗಾ ಇರಿಸಲಾಗುವುದು ಎಂಬ ಬರಹಗಳಿವೆ.







