ಕಾಶ್ಮೀರ: ಐವರು ಭಯೋತ್ಪಾದಕರ ಹತ್ಯೆ, ಹಿಂಸಾಚಾರದಲ್ಲಿ ನಾಗರಿಕನ ಸಾವು

ಸಾಂದರ್ಭಿಕ ಚಿತ್ರ
ಶ್ರೀನಗರ, ಸೆ.15: ಜಮ್ಮು ಕಾಶ್ಮೀರದ ಕುಲ್ಗಾಂವ್ ಜಿಲ್ಲೆಯಲ್ಲಿ ನಡೆಸಿದ ಎನ್ಕೌಂಟರ್ನಲ್ಲಿ ಲಷ್ಕರೆ ತಯ್ಯಬ ಹಾಗೂ ಹಿಝ್ಬುಲ್ ಮುಜಾಹಿದೀನ್ ಸಂಘಟನೆಯ ಐವರು ಉಗ್ರರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಎನ್ಕೌಂಟರ್ ನಡೆದ ಬಳಿಕ ಭದ್ರತಾ ಪಡೆಗಳ ವಿರುದ್ಧ ಪ್ರತಿಭಟನೆ ನಡೆದಿದ್ದು ಈ ಸಂದರ್ಭ ನಡೆದ ಹಿಂಸಾಚಾರದಲ್ಲಿ ಓರ್ವ ನಾಗರಿಕ ಮೃತಪಟ್ಟಿದ್ದು 10 ಮಂದಿ ಗಾಯಗೊಂಡಿದ್ದಾರೆ
ದಕ್ಷಿಣ ಕಾಶ್ಮೀರದ ಕುಲ್ಗಾಂವ್ ಜಿಲ್ಲೆಯ ಚೌಗಾಮ್ ಎಂಬಲ್ಲಿ ಎನ್ಕೌಂಟರ್ ನಡೆಸಿ ಐವರು ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆಗಳು ಭಾರೀ ಪ್ರಮಾಣದಲ್ಲಿ ಆಯುಧ ಹಾಗೂ ಆಹಾರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹತರಾದ ಉಗ್ರರು ಇಬ್ಬರು ಬ್ಯಾಂಕ್ ಉದ್ಯೋಗಿಗಳು ಹಾಗೂ ಪೊಲೀಸರು ಸೇರಿದಂತೆ ಹಲವರ ಹತ್ಯೆ ಪ್ರಕರಣದಲ್ಲಿ ಶಾಮೀಲಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಎನ್ಕೌಂಟರ್ ನಡೆದ ಬಳಿಕ ಕೆಲವು ಯುವಕರು ಹಾಗೂ ಭದ್ರತಾ ಪಡೆಗಳ ಮಧ್ಯೆ ಘರ್ಷಣೆ ನಡೆದಿದೆ. ಘರ್ಷಣೆ ನಿರತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ಪೆಲೆಟ್ ಗುಂಡುಗಳನ್ನು ಪ್ರಯೋಗಿಸಿದಾಗ ಒಬ್ಬ ನಾಗರಿಕ ಮೃತಪಟ್ಟು 10 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಐವರಿಗೆ ಕಣ್ಣಿನ ಭಾಗಕ್ಕೆ ಪೆಲೆಟ್ ಗುಂಡಿನ ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.





