ಹೆಜಮಾಡಿ: ಟ್ಯಾಂಕರ್ ಢಿಕ್ಕಿ; ಸ್ಕೂಟರ್ ಸವಾರ ಸಾವು

ಪಡುಬಿದ್ರೆ, ಸೆ. 15: ರಾಷ್ಟ್ರೀಯ ಹೆದ್ದಾರಿ 66ರ ಹೆಜಮಾಡಿಯಲ್ಲಿ ಟ್ಯಾಂಕರೊಂದು ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಶನಿವಾರ ಸಂಜೆ ನಡೆದಿದೆ.
ಉಡುಪಿಯ ನೇಜಾರಿನ ನಿವಾಸಿ ಜಯರಾಜ್ (55) ಮೃತಪಟ್ಟಿದ್ದು, ಟ್ಯಾಂಕರ್ ಚಾಲಕ ಬೆಂಗಳೂರಿನ ಗುರುಗುಂಟೆ ಪಾಳ್ಯ ನಿವಾಸಿ ಮೋಹನ್ ರಾಜ್ ಗಾಯಗೊಂಡಿದ್ದಾರೆ.
ನವಮಂಗಳೂರು ಬಂದರಿನಿಂದ ಪಾಮ್‍ಆಯಿಲ್ ಹೇರಿಕೊಂಡು ಹೋಗುತಿದ್ದ ಟ್ಯಾಂಕರ್ ಅಯ್ಯಪ್ಪ ನಗರ ಕ್ರಾಸ್ ಬಳಿ ತಲುಪುವಾಗ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಬಲಭಾಗದಲ್ಲಿ ಮುಲ್ಕಿ ಕಡೆಗೆ ಸಂಚರಿಸುತಿದ್ದ ಸ್ಕೂಟರಿಗೆ ಢಿಕ್ಕಿ ಹೊಡೆಯಿತು. ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಟ್ಯಾಂಕರ್ ಅಡಿ ಸಿಲುಕಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಟ್ಯಾಂಕರ್ ನವಮಂಗಳೂರು ಬಂದರಿನಿಂದ ಶ್ರೀರಂಗಪಟ್ಟಣಕ್ಕೆ ಪಾಮ್ ಆಯಿಲ್ ಕೊಂಡೊಯ್ಯುತಿತ್ತು. ಶ್ರೀರಂಗಪಟ್ಟಣಕ್ಕೆ ಪಡುಬಿದ್ರಿ, ಕುದ್ರೆಮುಖ, ಶೃಂಗೇರಿ ಮಾರ್ಗವಾಗಿ ತೆರಳಬೇಕಿತ್ತು. ಟ್ಯಾಂಕರ್ ಚಾಲಕನಿಗೆ ನಿಯಂತ್ರಣ ತಪ್ಪಿ ಈ ಅಪಘತ ನಡೆದಿರಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೃತ ಜಯರಾಜ್ ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಬಳಿಕ ಊರಿಗೆ ಮರಳಿದ್ದರು. ಪಕ್ಷಿಕೆರೆ ಮನೆಯೊಂದರ ಮೇಲ್ವಿಚಾರಕರಾಗಿ ಕೆಲಸ ನಿರ್ವಹಿಸುತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







