ಸ್ಯಾಫ್ ಕಪ್ ಚಾಂಪಿಯನ್: ಭಾರತಕ್ಕೆ ದೊರೆಯದ 8ನೇ ಪ್ರಶಸ್ತಿ

ಢಾಕಾ, ಸೆ.15: ಸ್ಯಾಫ್ ಸುಝುಕಿ ಕಪ್ ಫುಟ್ಬಾಲ್ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಶನಿವಾರ ಭಾರತಕ್ಕೆ 2-1 ಅಂತರದಲ್ಲಿ ಸೋಲುಣಿಸಿದ ಮಾಲ್ಡೀವ್ಸ್ ತಂಡ ದಶಕಗಳ ಬಳಿಕ ಮತ್ತೊಮ್ಮೆ ಪ್ರಶಸ್ತಿಯನ್ನು ಬಾಚಿಕೊಂಡಿದೆ.
ಇದರೊಂದಿಗೆ 8ನೇ ಬಾರಿ ಪ್ರಶಸ್ತಿನ ಗೆಲ್ಲುವ ಭಾರತದ ಪ್ರಯತ್ನ ಫಲ ನೀಡಲಿಲ್ಲ.
ಫೈನಲ್‌ನಲ್ಲಿ ಮಾಲ್ಡೀವ್ಸ್‌ನ ಇಬ್ರಾಹೀಂ ಹುಸೈನ್ 19ನೇ ನಿಮಿಷದಲ್ಲಿ ಗೋಲು ಜಮೆ ಮಾಡಿದರು. ದ್ವಿತೀಯಾರ್ಧದಲ್ಲಿ ಅಲಿ ಫಾಸಿರ್ ಗೋಲು ದಾಖಲಿಸಿ ತಂಡಕ್ಕೆ 2-0 ಮುನ್ನಡೆ ಸಾಧಿಸಲು ನೆರವಾದರು. ಆದರೆ ಭಾರತದ ಪರ 90+2ನೇ ನಿಮಿಷದಲ್ಲಿ ಸುಮೀತ್ ಪಾಸ್ಸಿ ಗೋಲು ಗಳಿಸಿದರು. ಬಳಿಕ ಭಾರತದ ಪರ ಗೋಲು ಬರಲಿಲ್ಲ. ಇದರೊಂದಿಗೆ ಮಾಲ್ಡೀವ್ಸ್ ತಂಡ ಸುಲಭವಾಗಿ ಗೆಲುವಿನ ನಗೆ ಬೀರಿತು. ಟೂರ್ನಮೆಂಟ್‌ನಲ್ಲಿ ಸತತ ಗೆಲುವಿನೊಂದಿಗೆ ಫೈನಲ್ ತಲುಪಿದ್ದ ಭಾರತ ತಂಡಕ್ಕೆ ಆಘಾತವಾಗಿದೆ.
ಸೆಮಿಫೈನಲ್‌ನಲ್ಲಿ ಭಾರತ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನವನ್ನು 3-1 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿತ್ತು. ಇನ್ನೊಂದು ಸೆಮಿಫೈನಲ್‌ನಲ್ಲಿ ನೇಪಾಳವನ್ನು ಮಾಲ್ಡೀವ್ಸ್ ತಂಡ 3-0 ಅಂತರದಲ್ಲಿ ಸೋಲಿಸಿ ಫೈನಲ್ ತಲುಪಿತ್ತು. 2008ರಲ್ಲಿ ಭಾರತದ ವಿರುದ್ಧ ಜಯಗಳಿಸಿದ ಮಾಲ್ಡೀವ್ಸ್ ಮೊದಲ ಬಾರಿ ಪ್ರಶಸ್ತಿ ಬಾಚಿಕೊಂಡಿತ್ತು. ಇದೀಗ ಮತ್ತೊಮ್ಮೆ ಪ್ರಶಸ್ತಿ ಬಾಚಿಕೊಂಡಿದೆ.





