ನೆರೆಸಂತ್ರಸ್ತರ ನಷ್ಟಪರಿಹಾರ ಮೊತ್ತದಿಂದಲೂ ಹಣ ಪೀಕಿಸುತ್ತಿರುವ ಕೇರಳದ ಬ್ಯಾಂಕುಗಳು: ಆರೋಪ

ಅಂಗಮಾಲಿ(ಕೇರಳ), ಸೆ.15: ನೆರೆಪೀಡಿತರಿಗೆ ಸರಕಾರ ನೀಡಿದ ಹತ್ತು ಸಾವಿರ ರೂಪಾಯಿ ನಷ್ಟಪರಿಹಾರ ಮೊತ್ತದಿಂದ ಬ್ಯಾಂಕುಗಳು ಮಿನಿಮಂ ಬ್ಯಾಲೆನ್ಸ್, ಎಸ್‍ಎಂಎಸ್ ಶುಲ್ಕಗಳನ್ನು ಕಡಿತ ಗೊಳಿಸುತ್ತಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ಚೆಂಙಮ್ಮನಾಡ್ ಕಪ್ರಶ್ಶೇರಿಯ ಗೃಹಿಣಿಗೆ ಸರಕಾರ ನೀಡಿದ 10,000 ರೂಪಾಯಿಯಲ್ಲಿ 800 ರೂ. ಕಡಿತಗೊಳಿಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
2017ರಲ್ಲಿ 100 ರೂಪಾಯಿ ಕೊಟ್ಟು ಮಹಿಳೆ ಖಾತೆ ತೆರೆದಿದ್ದರು. ಐದು ತಿಂಗಳ ನಂತರ ಬ್ಯಾಂಕು ನಿರ್ವಹಣೆ ವೆಚ್ಚ ಎಂದು 86.25 ರೂಪಾಯಿ ಕಡಿತಗೊಳಿಸಿತ್ತು. ಉಳಿದ ಹಣಕ್ಕೆ ಒಂದೂವರೆ ವಾರದ ಬಳಿಕ ಒಂದು ರೂಪಾಯಿ ಬಡ್ಡಿ ನೀಡಿತು. ಒಂದೂವರೆ ತಿಂಗಳ ನಂತರ ಒಟ್ಟು ಬ್ಯಾಲೆನ್ಸ್ ಮೇಂಟೆನೆನ್ಸ್ ವಸೂಲು ಮಾಡಿದಾಗ ಖಾತೆ ಝೀರೊ ಬ್ಯಾಲೆನ್ಸ್ ಆಗಿತ್ತು. ಕಳೆದ ಸೆಪ್ಟಂಬರ್ ಐದರಂದು ಸರಕಾರದ ಸಹಾಯಧನ 10,000 ರೂ. ಮಹಿಳೆಯ ಬ್ಯಾಂಕ್ ಖಾತೆಗೆ ಬಂದಿತ್ತು. ಮಿನಿಮಂ ಬ್ಯಾಲೆನ್ಸ್, ಎಸ್‍ಎಂಎಸ್ ಇತ್ಯಾದಿ ವೆಚ್ಚ ಎಂದು ತೋರಿಸಿ ಗೃಹಿಣಿಯಿಂದ 729.27 ರೂಪಾಯಿಯನ್ನು ಬ್ಯಾಂಕ್ ವಸೂಲು ಮಾಡಿದೆ ಎಂದು ಆರೋಪಿಸಲಾಗಿದೆ.
ಈಗ ಖಾತೆಯಲ್ಲಿ 9202.73 ರೂಪಾಯಿ ಇದ್ದು, ಕೂಡಲೇ ಹಣವನ್ನು ವಾಪಸು ಪಡೆಯದಿದ್ದರೆ ಬ್ಯಾಂಕ್ ಹಣ ಕಡಿತಗೊಳಿಸುತ್ತಾ ಹೋಗಬಹುದು. ಓಡಾಡಿ ದಾಖಲೆಗಳನ್ನು ಸರಿಪಡಿಸಿ ಅಧಿಕಾರಿಗಳಿಗೆ ಸಲ್ಲಿಸಿದ ಬಳಿಕ ಸರಕಾರ ಕೊಟ್ಟ ಹಣವನ್ನು ಬ್ಯಾಂಕ್ ಹೀಗೆ ಕಿತ್ತುಕೊಂಡಿದೆ. ಈ ಕುರಿತು ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದಾಗ ಒರಟಾಗಿ ಮಾತಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
2017ರ ನಂತರ ಬ್ಯಾಂಕ್‍ನಲ್ಲಿ 2,000 ರೂಪಾಯಿ ಮಿನಿಮಂ ಬ್ಯಾಲೆನ್ಸ್ ಬೇಕೆಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಿದ್ದಾರೆ. ಇಲ್ಲದಿದ್ದರೆ ಖಾತೆಗೆ ಹಣ ಬಂದಾಗ ನಿರ್ವಹಣೆ ವೆಚ್ಚ ವಸೂಲು ಮಾಡಲಾಗುತ್ತದೆ ಎಂದು ಆರೋಪಿಸಲಾಗಿದೆ.







