ಇಸ್ರೇಲ್ ಸೈನಿಕರ ಗುಂಡಿಗೆ 3 ಫೆಲೆಸ್ತೀನಿಯರು ಬಲಿ
ಕನಿಷ್ಠ 30 ಮಂದಿಗೆ ಗಾಯ

ಗಾಝಾ ಸಿಟಿ (ಫೆಲೆಸ್ತೀನ್) ಸೆ. 15: ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಜೊತೆಗಿನ ಗಡಿಗೆ ಸಮೀಪದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದ ಫೆಲೆಸ್ತೀನಿಯರ ಮೇಲೆ ಇಸ್ರೇಲ್ ಸೈನಿಕರು ಹಾರಿಸಿದ ಗುಂಡಿಗೆ ಮೂವರು ಫೆಲೆಸ್ತೀನಿಯರು ಬಲಿಯಾಗಿದ್ದಾರೆ ಹಾಗೂ ಕನಿಷ್ಠ 30 ಮಂದಿ ಗಾಯಗೊಂಡಿದ್ದಾರೆ.
ಸುಮಾರು 12,000 ಫೆಲೆಸ್ತೀನಿಯರು ಇಸ್ರೇಲ್ ಗಡಿಯೊಳಗೆ ನುಗ್ಗುವುದನ್ನು ತಡೆಯುವುದಕ್ಕಾಗಿ ಅವರ ವಿರುದ್ಧ ಬಲಪ್ರಯೋಗ ನಡೆಸಲಾಯಿತು ಎಂದು ಇಸ್ರೇಲ್ ಸೇನೆ ಹೇಳಿದೆ. ಪ್ರತಿಭಟನಕಾರರ ಪೈಕಿ ಕೆಲವರು ಟಯರ್‌ಗಳನ್ನು ಹೊತ್ತಿಸಿ ಅದರ ಹೊಗೆಯ ಮರೆಯಲ್ಲಿ ಇಸ್ರೇಲ್ ಸೈನಿಕರತ್ತ ಕಲ್ಲುಗಳನ್ನು ಎಸೆಯುತ್ತಿದ್ದರು ಹಾಗೂ ಬೆಂಕಿಯುಂಡೆಗಳನ್ನು ಎಸೆಯುತ್ತಿದ್ದರು ಎಂದು ಅದು ಆರೋಪಿಸಿದೆ.
ಮೃತಪಟ್ಟ ಫೆಲೆಸ್ತೀನಿಯರಲ್ಲಿ ಓರ್ವ 14 ವರ್ಷದ ಬಾಲಕ ಸೇರಿದ್ದಾನೆ.
ಇದರೊಂದಿಗೆ ಮಾರ್ಚ್ 30ರಂದು ಆರಂಭವಾದ ಸರಣಿ ಪ್ರತಿಭಟನೆಗಳಲ್ಲಿ ಮೃತಪಟ್ಟ ಫೆಲೆಸ್ತೀನಿಯರ ಸಂಖ್ಯೆ 177ಕ್ಕೇರಿದೆ.
Next Story





