ಇರಾನ್ ಜೊತೆ ಆರ್ಥಿಕ ವ್ಯವಹಾರ ನಿಲ್ಲಿಸಿ: ದೇಶಗಳಿಗೆ ಎಚ್ಚರಿಕೆ ನೀಡಿದ ಅಮೆರಿಕ

ವಾಶಿಂಗ್ಟನ್, ಸೆ. 15: ಇರಾನ್ ವಿರುದ್ಧ ವಿಧಿಸಲಾಗಿರುವ ಆರ್ಥಿಕ ದಿಗ್ಬಂಧನ ನವೆಂಬರ್ 4ರಂದು ಪೂರ್ಣ ಪ್ರಮಾಣದಲ್ಲಿ ಜಾರಿಗೊಂಡ ಬಳಿಕವೂ ಆ ದೇಶದೊಂದಿಗೆ ಆರ್ಥಿಕ ವ್ಯವಹಾರಗಳನ್ನು ನಡೆಸುವ ದೇಶಗಳನ್ನು ನಿಭಾಯಿಸಲು, ‘ಸಂಪೂರ್ಣ ಭಿನ್ನ ನಿಯಮ’ಗಳನ್ನು ರೂಪಿಸಲಾಗುವುದು ಎಂದು ಅಮೆರಿಕ ಎಚ್ಚರಿಸಿದೆ.
‘‘ಈ ವಿಷಯದಲ್ಲಿ ಯಾವುದೇ ತಪ್ಪು ಮಾಡಬೇಡಿ. ನವೆಂಬರ್ 4ರ ಬಳಿಕ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಜೊತೆಗೆ ಆರ್ಥಿಕ ವ್ಯವಹಾರಗಳಲ್ಲಿ ತೊಡಗುವ ಯಾವುದೇ ದೇಶದೊಂದಿಗೆ ವ್ಯವಹರಿಸಲು ಸಂಪೂರ್ಣ ಬೇರೆಯದೇ ಆದ ನಿಯಮಗಳನ್ನು ರೂಪಿಸಲಾಗುವುದು’’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಶುಕ್ರವಾರ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದರು.
ಇರಾನ್ ಮೇಲೆ ಅಮೆರಿಕ ವಿಧಿಸಿರುವ ಆರ್ಥಿಕ ದಿಗ್ಬಂಧನಗಳು ಭಾರತದ ಮೇಲೆಯೂ ವ್ಯತಿರಿಕ್ತ ಪರಿಣಾಮಗಳನ್ನು ಬೀರಲಿವೆ.
ಭಾರತವು ಇರಾನ್ ತೈಲದ ಅತಿ ದೊಡ್ಡ ಆಮದು ದೇಶವಾಗಿದೆ. ಅದೂ ಅಲ್ಲದೆ ಭಾರತವು ಇರಾನ್ ಜೊತೆಗೆ ಪ್ರಸಕ್ತ ಆಯಕಟ್ಟಿನ ಚಾಬಹರ್ ಬಂದರನ್ನು ಅಭಿವೃದ್ಧಿಪಡಿಸುತ್ತಿದೆ.
ಅಮೆರಿಕದ ಟ್ರಂಪ್ ಆಡಳಿತವನ್ನು ಎದುರು ಹಾಕಿಕೊಂಡರೆ, ಅದು ಎಲ್ಲ ರೀತಿಯ ನೆರವು ಮತ್ತು ವಿನಾಯಿತಿಗಳನ್ನು ಹಿಂದೆಗೆದುಕೊಳ್ಳುವುದು ಖಚಿತ. ಹಾಗೂ ಇದು ಸಂಭವಿಸಿದರೆ ಭಾರತದ ಮೇಲೆ ವ್ಯತಿರಿಕ್ತ ಪರಿಣಾಮವಾಗುವುದು ಖಚಿತ.







