ಮಾಯಾವತಿ ಜೊತೆ ಯಾವುದೇ ಮನಸ್ತಾಪವಿಲ್ಲ, ಬಿಜೆಪಿ ಸೋಲಿಸುವುದೇ ನಮ್ಮ ಗುರಿ
ಭೀಮ್ ಆರ್ಮಿ ನಾಯಕ ಚಂದ್ರಶೇಖರ್

ಸಹರಣ್‌ಪುರ, ಸೆ. 15: ನಮ್ಮ ಒಂದೇ ಗುರಿ ಬಿಜೆಪಿಯನ್ನು ಸೋಲಿಸುವುದು. ಯಾರು ಅದನ್ನು ಮಾಡುತ್ತಾರೋ ಅವರಿಗೆ ನಾವು ಬೆಂಬಲ ನೀಡುತ್ತೇವೆ. ಒಂದು ವೇಳೆ ಮಹಾಮೈತ್ರಿ ಸಾಧ್ಯವಿಲ್ಲವೆಂದಾದರೆ, ಬಿಎಸ್‌ಪಿ ಇತರ ಪಕ್ಷಗಳೊಂದಿಗೆ ಕೈ ಜೋಡಿಸುವಂತೆ ನಾವು ಸಾಮಾಜಿಕ ಒತ್ತಡ ಹೇರಲಿದ್ದೇವೆ. ನಾವು ರಾಜ್ಯಾದ್ಯಂತ ರ‌್ಯಾಲಿ ನಡೆಸಲಿದ್ದೇವೆ. ಬಿಜೆಪಿಯನ್ನು ಸೋಲಿಸಲು ಇದು ಅತ್ಯಗತ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು ಎಂದು ಭೀಮ್ ಆರ್ಮಿಯ ಸ್ಥಾಪಕ ಚಂದ್ರಶೇಖರ್ ಆಝಾದ್ ಅವರು ಶನಿವಾರ ಹೇಳಿದ್ದಾರೆ.
ಕಳೆದ ಒಂದು ವರ್ಷಕ್ಕೂ ಅಧಿಕ ಕಾಲ ಸಹರಣ್‌ಪುರ ಕಾರಾಗೃಹದಲ್ಲಿ ಇದ್ದ ಅವರು ಶನಿವಾರ ಬಿಡುಗಡೆಗೊಂಡರು. ಹಾಗಾದರೆ, ಈ ಹಿಂದೆ ಭೀಮ್ ಆರ್ಮಿ ಬಿಜೆಪಿಯ ಬಿ ತಂಡ ಎಂದು ಕರೆದ ಮಾಯಾವತಿ ಅವರಿಗೆ ಬೆಂಬಲ ನೀಡುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘‘ಅವರು (ಮಾಯಾವತಿ) ಸಾಹೇಬ್ (ಕಾನ್ಶಿರಾಮ್) ಅವರೊಂದಿಗೆ ಹೋರಾಟ ಮಾಡಿದ್ದಾರೆ. ಆದುದರಿಂದ ನಾವು ಈಗ ಈ ತಿರುವು ಪಡೆದುಕೊಳ್ಳಬೇಕು. ಸಮಾಜವನ್ನು ರೂಪಿಸಬೇಕು, ನಮ್ಮ ಜನರಲ್ಲಿ ನೈತಿಕತೆ ಉತ್ತೇಜಿಸಬೇಕು, ಅವರಿಗೆ ಶಿಕ್ಷಣ ನೀಡಿ ಸಬಲೀಕರಿಸಬೇಕು. ಅವರು (ಮಾಯಾವತಿ) ತಮ್ಮ ಚುನಾವಣಾ ರಾಜಕೀಯ ಮುಂದುವರಿಸಬೇಕು ಎಂದಿದ್ದಾರೆ. ನಮ್ಮಿಬ್ಬರಲ್ಲೂ ಹರಿಯುತ್ತಿರುವುದು ಒಂದೇ ರಕ್ತ. ಅವರಿಗೆ ನನ್ನೊಂದಿಗೆ ಮನಸ್ತಾಪ ಇರಬಹುದು. ಆದರೆ, ನನಗೆ ಅವರೊಂದಿಗೆ ಯಾವುದೇ ಮನಸ್ತಾಪ ಇಲ್ಲ. ನಮ್ಮ ಒಂದೇ ಗುರಿ ಬಿಜೆಪಿಯನ್ನು ಸೋಲಿಸುವುದು ಎಂದು ಅವರು ತಿಳಿಸಿದ್ದಾರೆ. ನಿಮ್ಮ ಬಿಡುಗಡೆಯಿಂದ ಬಿಜೆಪಿ ರಾಜಕೀಯ ಮೈಲೇಜ್ ಪಡೆದುಕೊಳ್ಳಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ನಾನು ಜೀವಂತ ಇರುವವರೆಗೆ ಅದು ಸಾಧ್ಯವಾಗಲಾರದು. ನಾವು ಮತದ ಮೂಲಕ ಬಿಜೆಪಿಯನ್ನು ನಾಶ ಮಾಡಲಿದ್ದೇವೆ ಎಂದರು.
ಕಾರಾಗೃಹದಿಂದ ಬಿಡುಗಡೆಗೊಂಡ ಬಳಿಕ ಚಂದ್ರಶೇಖರ್ ಛುಟ್ಮಾಲ್‌ಪುರದ ಸಹರಣಪುರದಲ್ಲಿರುವ ತನ್ನ ನಿವಾಸಕ್ಕೆ ಆಗಮಿಸಿದರು. ತನ್ನ ನಿವಾಸದ ಸಮೀಪ ಇರುವ ಪುಟ್ಟ ಸ್ಥಳವೊಂದರಲ್ಲಿ ಅವರು ಬೆಂಬಲಿಗರು ಹಾಗೂ ಹಿತೈಷಿಗಳನ್ನು ಭೇಟಿಯಾದರು. ಔರಂಗಾಬಾದ್ ಹಾಗೂ ಹರಿದ್ವಾರದಿಂದ ಕೂಡ ಬೆಂಬಲಿಗರು ಆಗಮಿಸಿದ್ದರು.







