ಮೋದಿ ಸರಕಾರದಿಂದ ದಲಿತರ ಬದುಕು ‘ಡಿಲೀಟೀಕರಣ’: ಎನ್‌ಎಪಿಎಂ ರಾಷ್ಟ್ರೀಯ ಸಂಚಾಲಕ ಡಾ.ಸುನೀಲಂ

ಬೆಂಗಳೂರು, ಸೆ. 15: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಡಿಜಲೀಟಿಕರಣದ ಹೆಸರಿನಲ್ಲಿ ಬಡ ಕೂಲಿ ಕಾರ್ಮಿಕರು ಮತ್ತು ದಲಿತರ ಬದುಕನ್ನು ‘ಡಿಲೀಟೀಕರಣ’ (ನಾಶ) ಮಾಡುತ್ತದೆ ಎಂದು ಎನ್‌ಎಪಿಎಂನ ರಾಷ್ಟ್ರೀಯ ಸಂಚಾಲಕ ಡಾ.ಸುನೀಲಂ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಇಲ್ಲಿನ ದೊಡ್ಡಬಳ್ಳಾಪುರ ಸಮೀಪದ ಅನಿಬೆಸೆಂಟ್ ಸ್ಕೌಟ್ಸ್ ಅಂಡ್ ಗೈಡ್ಸ್ ಆವರಣದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಏರ್ಪಡಿಸಿದ್ದ ಅಧ್ಯಯನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಪೊರೇಟ್ ಮತ್ತು ಸಂಘಪರಿವಾರದ ಅಜೆಂಡಾ ಜಾರಿಗೆ ತರುತ್ತಿರುವ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ನಾಶ ಮಾಡುವುದು ನಿಶ್ಚಿತ ಎಂದು ಎಚ್ಚರಿಸಿದರು.
ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿನ ಕೂಲಿ ಕಾರ್ಮಿಕರ ಪರವಾಗಿದ್ದ ಕಾನೂನುಗಳನ್ನು ನಾಶ ಮಾಡಿದ್ದು, ಅವೆಲ್ಲವನ್ನು ಕಾರ್ಪೋರೇಟ್ ಹಿತಕ್ಕೆ ತಕ್ಕಂತೆ ಬದಲಾವಣೆ ಮಾಡಲಾಗಿದೆ ಎಂದ ಅವರು, ಆದಿವಾಸಿ ಮತ್ತು ದಲಿತರ ಪರ ಧ್ವನಿ ಎತ್ತುವವರನ್ನು ‘ಅರ್ಬನ್ ನಕ್ಸಲ್ಸ್’ ಎಂದು ಹತ್ತಿಕ್ಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ದಲಿತರು, ಆದಿವಾಸಿಗಳು, ಕೂಲಿ ಕಾರ್ಮಿಕರು ಸೇರಿದಂತೆ ಪ್ರಜಾತಂತ್ರವಾದಿಗಳು ಹಾಗೂ ಸಂವಿಧಾನ ಉಳಿವಿಗಾಗಿ ಒಗ್ಗಟ್ಟಿನಿಂದ ಬಿಜೆಪಿ ವಿರುದ್ಧ ಹೋರಾಟ ರೂಪಿಸಬೇಕು ಎಂದು ಅವರು ಇದೇ ವೇಳೆ ಕರೆ ನೀಡಿದರು.
ಅಧ್ಯಕ್ಷತೆಯನ್ನು ದಸಂಸ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ವಹಿಸಿದ್ದು, ಬೆಂಗಳೂರು ವಿಭಾಗೀಯ ಸಂಚಾಲಕ ಜೀವನಹಳ್ಳಿ ವೆಂಕಟೇಶ್, ಸಂಘಟನಾ ಸಂಚಾಲಕ ಕಲ್ಲಪ್ಪ ಕಾಂಬ್ಲೆ, ಮುಖಂಡರಾದ ಶ್ಯಾಂ ಘಾಟ್ಗೆ, ಶರಣಪ್ಪ ಗುಳಬಾಳ, ದೊಡ್ಡಮನಿ, ಶೋಭಾ ಕಟ್ಟಿಮನಿ, ಕ್ಯಾಲಸನಹಳ್ಳಿ ಶ್ರೀನಿವಾಸ್ ಉಪಸ್ಥಿತರಿದ್ದರು.







