ಬೆಂಗಳೂರು ಚಿತ್ರೋತ್ಸವಕ್ಕೆ ಅಂತರ್‌ರಾಷ್ಟ್ರೀಯ ಮಾನ್ಯತೆ ಸಿಗಲು ಅಗತ್ಯಕ್ರಮ: ನಾಗತಿಹಳ್ಳಿ ಚಂದ್ರಶೇಖರ್

ಬೆಂಗಳೂರು, ಸೆ.15: ಬೆಂಗಳೂರು ಅಂತರ್‌ರಾಷ್ಟ್ರೀಯ ಚಿತ್ರೋತ್ಸವಕ್ಕೆ ಅಂತರ್‌ರಾಷ್ಟ್ರೀಯ ಮಾನ್ಯತೆ ಸಿಗುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಶನಿವಾರ ನಗರದ ವಾರ್ತಾ ಇಲಾಖೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಅಂತರ್‌ರಾಷ್ಟ್ರೀಯ ಸಿನೆಮೋತ್ಸವವನ್ನು ಪ್ರತಿ ವರ್ಷ ಒಂದೇ ದಿನಾಂಕದಂದು ನಡೆಸಿದರೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ದಸರಾ ಚಿತ್ರೋತ್ಸವ: ದಸರಾ ಮಹೋತ್ಸವ ಸಂದರ್ಭದಲ್ಲಿ ಒಂದು ವಾರಗಳ ಕಾಲ ದಸರಾ ಚಿತ್ರೋತ್ಸವ ನಡೆಸಲು ಉದ್ದೇಶಿಸಿದ್ದು, ಕನ್ನಡದ ಜತೆಗೆ ದೇಶ, ವಿದೇಶಗಳ ಚಿತ್ರಗಳನ್ನು ಪ್ರದರ್ಶಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಪ್ರದರ್ಶನಗೊಳ್ಳುವ ಸಿನೆಮಾಗಳ ಪಟ್ಟಿಯನ್ನು ಶೀಘ್ರವೆ ಬಿಡುಗಡೆ ಮಾಡಲಾಗುವುದು ಎಂದು ಅವರು ಹೇಳಿದರು.
ಸಿನೆಮಾದ ಕುರಿತಂತೆ ವಿವಿಧ ಪುಸ್ತಕಗಳನ್ನು ಹೊರ ತರುವ ಕೆಲಸವನ್ನು ಅಕಾಡೆಮಿ ಮಾಡಲು ಮುಂದಾಗಿದೆ. ಸಿನೆಮಾ ಮತ್ತು ಸಾಹಿತ್ಯ ಸಮನ್ವಯತೆಯನ್ನು ಸಾಧಿಸಿದಾಗ ಉತ್ಕೃಷ್ಟ ಸಿನೆಮಾಗಳು ನಿರ್ಮಾಣಗೊಳ್ಳಲು ಸಾಧ್ಯವಾಗುತ್ತದೆ. ಸಾಹಿತ್ಯದ ಬೆಂಬಲದಿಂದ ಸಿನೆಮಾ ಕ್ಷೇತ್ರ ಶ್ರೀಮಂತಗೊಳ್ಳಲಿದೆ ಎಂದು ಅವರು ಆಶಿಸಿದರು.







