ಬೆಂಗಳೂರು: ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ; ಬಾಕಿ ಬಿಲ್ ಪಾವತಿಸಲು ಆಗ್ರಹ

ಬೆಂಗಳೂರು, ಸೆ.15: ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿಗೆ ಪಾವತಿಯಾಗದ ಬಾಕಿ ಬಿಲ್ ಅನ್ನು ಬಿಬಿಎಂಪಿ ಈ ಕೂಡಲೇ ಪಾವತಿಸಬೇಕೆಂದು ಒಣತ್ಯಾಜ್ಯ ಸಂಗ್ರಹಣಾ ಕೇಂದ್ರಗಳ ನಿರ್ವಾಹಕರ ಒಕ್ಕೂಟ ಆಗ್ರಹಿಸಿದೆ.
ಶನಿವಾರ ನಗರದ ಪುರಭವನದ ಎದುರು ಜಮಾಯಿಸಿದ ಒಕ್ಕೂಟದ ಸದಸ್ಯರು ಹಾಗೂ ಚಿಂದಿ ಆಯುವವರು ಪ್ರತಿಭಟನೆ ನಡೆಸಿ, ಬಿಲ್ ಪಾವತಿ ಮಾಡದ ಬಿಬಿಎಂಪಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಒಣತ್ಯಾಜ್ಯ ಸಂಗ್ರಹಣ ಘಟಕ ಒಕ್ಕೂಟದ ಮನ್ಸೂರ್ ಮಾತನಾಡಿ, ಎರಡು ವರ್ಷಗಳ ಹಿಂದೆಯೇ ವಾರ್ಡ್‌ನ ಪ್ರತಿ ಮನೆಗಳಿಗೂ ಭೇಟಿ ನೀಡಿ ಒಣ ತ್ಯಾಜ್ಯ ಸಂಗ್ರಹಿಸಿ ಅದನ್ನು ವಿಭಜಿಸಲು ಬಿಬಿಎಂಪಿ ಒಣ ತ್ಯಾಜ್ಯ ಸಂಗ್ರಹಣಾ ಘಟಕಗಳನ್ನು ನಿರ್ಮಿಸಿ ಗುತ್ತಿಗೆ ನೀಡಿದೆ. ಈ ಘಟಕಗಳ ನಿರ್ವಹಣೆಗೆ ಒಬ್ಬ ವಾಹನ ಚಾಲಕ ಹಾಗೂ ಸಹಾಯಕ ಸಿಬ್ಬಂದಿಗೆ ವೇತನ ನೀಡಲು ಪಾಲಿಕೆಯ ವತಿಯಿಂದ ಪ್ರತಿ ತಿಂಗಳು 44 ಸಾವಿರ ವೇತನ ಕೊಡಲಾಗುತ್ತಿತ್ತು. ಆದರೆ, ಕಳೆದ 10 ತಿಂಗಳಿಂದ 34 ವಾರ್ಡ್‌ಗಳ ಒಣತ್ಯಾಜ್ಯ ಸಂಗ್ರಹಣಾ ಘಟಕಗಳಿಗೆ ಬಿಲ್ ಪಾವತಿಯಾಗಿಲ್ಲ. ಹಾಗಾಗಿ, ಘಟಕಗಳ ನಿರ್ವಹಣೆಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗುತ್ತಿಗೆ ಸಮಯದಲ್ಲಿ ಆಯುಕ್ತರು ಪ್ರತಿ ತಿಂಗಳು 7ನೇ ದಿನಾಂಕದಂದು ನಿರ್ವಹಣಾ ವೆಚ್ಚ ನೀಡಬೇಕು ಎಂದು ಆದೇಶ ನೀಡಿದ್ದರೂ, ಬಿಬಿಎಂಪಿಗೆ ಮಾತ್ರ ನಾವು ಬೇಡವಾಗಿದ್ದೇವೆ. ಆದರೂ, ನಮಗೆ ನಿರ್ವಹಣಾ ವೆಚ್ಚ ನೀಡದಿದ್ದರೂ, ಮನೆ ಮನೆಗೆ ತೆರಳಿ ಒಣ ತ್ಯಾಜ್ಯ ಸಂಗ್ರಹಿಸುವ ಕೆಲಸವನ್ನು ನಿಲ್ಲಿಸಿಲ್ಲ. ಶೀಘ್ರವೇ ಬಿಲ್ ಪಾವತಿಯಾದಿದ್ದರೆ ನಮ್ಮ ಕಾರ್ಯಚಟುವಟಿಕೆಯನ್ನು ನಿಲ್ಲಿಸಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಈ ಘಟಕಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಇಎಸ್‌ಐ ಹಾಗೂ ಭವಿಷ್ಯ ನಿಧಿ ನೀಡಬೇಕು ಎಂದು 2017 ಜುಲೈನಲ್ಲಿ ಪಾಲಿಕೆ ಆಯುಕ್ತರು ಕಾರ್ಯಾದೇಶ ಮಾಡಿದ್ದು, ಈವರೆಗೂ ಪಾಲಿಕೆಯ ಯಾವ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿಲ್ಲ ಎಂದು ಮನ್ಸೂರ್ ಆರೋಪಿಸಿದರು.
ಇನ್ನು ಪಾಲಿಕೆ ಹಣಕಾಸು ಅಧಿಕಾರಿಗಳು ಮಾಸಿಕ ಸಭೆ ನಡೆಸಿ ಬಿಲ್ ಪಾವತಿ ಹಾಗೂ ಘಟಕಗಳ ದುರಸ್ಥಿ ಕುರಿತು ಚರ್ಚಿಸಬೇಕು. ಬಿಲ್ ಬಾಕಿ ಸಮಸ್ಯೆ ತಡೆಯಲು ಪಾಲಿಕೆಯು ವಿಶೇಷ ಬ್ಯಾಂಕ್ ಖಾತೆಯೊಂದನ್ನು ತೆಗೆದು ನೇರವಾಗಿ ಘಟಕಗಳ ನಿರ್ವಾಹಕರಿಗೆ ಪ್ರತಿ ತಿಂಗಳು ನೇರವಾಗಿ ಹಣ ಜಮೆಯಾಗುವಂತೆ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಿದರು.







