ಬಿಬಿಎಂಪಿಯಲ್ಲಿ ಅಧಿಕಾರಕ್ಕಾಗಿ ಬಿಜೆಪಿ ವಿಫಲಯತ್ನ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಬೆಂಗಳೂರು, ಸೆ. 15: ರಾಜ್ಯದ ಮೈತ್ರಿ ಸರಕಾರ ಉರುಳಿಸಲು ಯತ್ನಿಸಿರುವ ಬಿಜೆಪಿ ಈ ಪ್ರಯತ್ನದಲ್ಲಿ ವಿಫಲವಾಗಿದ್ದು, ಇದೀಗ ಬಿಬಿಎಂಪಿಯಲ್ಲೂ ಅಧಿಕಾರಕ್ಕಾಗಿ ಅಂತಹದ್ದೆ ಯತ್ನ ನಡೆಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ಶನಿವಾರ ನಗರದಲ್ಲಿ ಬಿಬಿಎಂಪಿ ಮೇಯರ್ ಆಯ್ಕೆ ಸಂಬಂಧ ಸಚಿವರು, ಶಾಸಕರು, ಮುಖಂಡರು ಹಾಗೂ ಪಾಲಿಕೆ ಸದಸ್ಯರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಬಿಜೆಪಿ ಮುಖಂಡರು ಬಿಬಿಎಂಪಿಯಲ್ಲಿ ಅಧಿಕಾರ ಕಿತ್ತುಕೊಳ್ಳಲು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಬಿಎಂಪಿಯಲ್ಲಿ ಅಧಿಕಾರ ಪಡೆಯಲು ಪಕ್ಷೇತರ ಅಭ್ಯರ್ಥಿಗಳನ್ನು ಕರೆದುಕೊಂಡು ಮಾನಸಿಕ ಹಿಂಸೆ ನೀಡಿದ್ದಾರೆ. ಆದರೆ, ಪಕ್ಷೇತರರು ನಮ್ಮ ಜೊತೆಯೇ ಬರುವುದಾಗಿ ತಿಳಿಸಿದ್ದಾರೆ. ಆದುದರಿಂದ 3 ವರ್ಷಗಳಿಂದ ನಡೆಯುತ್ತಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆಯುತ್ತದೆ ಎಂದರು.
ಬಿಜೆಪಿ ಮುಖಂಡರ ಸಮಾಲೋಚನೆ ಬಳಿಕ ಪಕ್ಷೇತರರೆಲ್ಲರೂ ನಮ್ಮ ಬಳಿ ಬಂದು ಬಿಜೆಪಿ ನೀಡಿದ ಆಫರ್ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೆ, ಅಭ್ಯರ್ಥಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ. ಬಿಜೆಪಿ ಮುಖಂಡರು ಅಧಿಕಾರ ಪಡೆಯಲು ವ್ಯರ್ಥ ಪ್ರಯತ್ನ ಮಾಡುತ್ತಿದ್ದು, ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ ಎಂದು ಟೀಕಿಸಿದರು.
ಬಿಬಿಎಂಪಿ ಮೈತ್ರಿ ಕುರಿತು ಮಾಜಿ ಸಚಿವ ರಾಮಲಿಂಗಾರೆಡ್ಡಿ, ಸಚಿವ ಕೆ.ಜೆ. ಜಾರ್ಜ್, ಶಾಸಕ ಹಾರಿಸ್ ಸೇರಿದಂತೆ ಹಿರಿಯ ಮುಖಂಡರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು. ಪಕ್ಷೇತರ ಸದಸ್ಯರು ನಮ್ಮೊಂದಿಗೆ ಇದ್ದಾರೆ. ಅವರು ಯಾವುದೇ ಬೇಡಿಕೆಯನ್ನಿಟ್ಟಿಲ್ಲ ಎಂದು ಸ್ಪಷ್ಟಣೆ ನೀಡಿದರು.







