ಸಿಲಿಂಡರ್ ಸ್ಫೋಟ: ಯುವಕನಿಗೆ ಗಾಯ
ಬೆಂಗಳೂರು, ಸೆ.15: ಗ್ಯಾಸ್ ಫಿಲ್ಲಿಂಗ್ ವೇಳೆ ಸಿಲಿಂಡರ್ ಸ್ಫೋಟಗೊಂಡಿದ್ದು, ಯುವಕನೊಬ್ಬನಿಗೆ ಗಾಯವಾಗಿರುವ ಘಟನೆ ಇಲ್ಲಿನ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಗ್ಯಾಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹೇಮಂತ್ ಎಂಬಾತನಿಗೆ ತೀವ್ರಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಕಾಟನ್ ಪೇಟೆಯ ವಂದನಾ ಹೊಟೇಲ್ ಬಳಿಯ ಅಂಗಡಿಯೊಂದರಲ್ಲಿ ಶುಕ್ರವಾರ ರಾತ್ರಿ 10:50ರ ಸುಮಾರಿಗೆ ಹೇಮಂತ್ ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದ. ಈ ವೇಳೆ ಅನಿಲ ಸೋರಿಕೆಯಾಗಿ ಸ್ಫೋಟಗೊಂಡಿದೆ. ತಕ್ಷಣವೇ ಗಾಯಾಳು ಹೇಮಂತ್ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿಲಿಂಡರ್ ಸ್ಫೋಟದಿಂದ ಅಂಗಡಿಯ ಒಳಭಾಗ ಸಂಪೂರ್ಣ ಕುಸಿದು ಬಿದ್ದಿದ್ದು, ಸ್ಥಳಕ್ಕೆ ದೌಡಾಯಿಸಿದ ಕಾಟನ್ ಪೇಟೆ ಪೊಲೀಸರು, ಕಟ್ಟಡದ ಮಾಲಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕಟ್ಟಡ 50 ವರ್ಷಕ್ಕೂ ಹಳೆಯದ್ದಾಗಿದ್ದು, ಬೊಮ್ಮನಹಳ್ಳಿ ನಿವಾಸಿಯೊಬ್ಬರಿಗೆ ಸೇರಿದ್ದಾಗಿದೆ. ಕಳೆದ ಒಂದು ವರ್ಷದಿಂದ ಈ ಕಟ್ಟಡದ ಮನೆಯೊಂದರಲ್ಲಿ ಅಂಗಡಿ ಮಾಡಿಕೊಂಡು ಅಕ್ರಮ ಗ್ಯಾಸ್ ರೀ-ಫಿಲ್ಲಿಂಗ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.





