"5 ತಿಂಗಳಾದರೂ ಸರಕಾರಿ ಶಾಲಾ ಮಕ್ಕಳಿಗೆ ದೊರೆಯದ 2ನೆ ಸಮವಸ್ತ್ರ"
ಬೆಂಗಳೂರು, ಸೆ.15: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 5 ತಿಂಗಳು ಕಳೆದರೂ ಸರಕಾರಿ ಶಾಲಾ ಮಕ್ಕಳಿಗೆ 2ನೆ ಸಮವಸ್ತ್ರ ಕೊಳ್ಳಲು ಸರಕಾರ ಎಸ್‌ಡಿಎಂಸಿ ಖಾತೆಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಸಾಮಾಜಿಕ ಹೋರಾಟಗಾರ ಸುನೀಲ್ ಇಜಾರಿ ತಿಳಿಸಿದರು.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯಗಳಲ್ಲಿ ಜೂನ್ ತಿಂಗಳಲ್ಲೇ 2ನೆ ಸಮವಸ್ತ್ರದ ಹಣವನ್ನು ಎಸ್‌ಡಿಎಂಸಿ ಖಾತೆಗೆ ಹಣ ಬಿಡುಗಡೆ ಮಾಡಿದ್ದಾರೆ. ಆದರೆ, ರಾಜ್ಯ ಯೋಜನಾ ನಿರ್ದೇಶಕರು ಒಳ ಒಪ್ಪಂದ ಮಾಡಿಕೊಂಡು ವಿಳಂಬ ಮಾಡುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರು.
ಆದೇಶ ಬಂದ ಮೇಲೆ ಬಟ್ಟೆ ವ್ಯಾಪಾರಸ್ಥರು ಸಮವಸ್ತ್ರಕ್ಕೆ ಬೇಕಾಗಿರುವ ಬಟ್ಟೆಯ ಬಣ್ಣ ಮತ್ತಿತರ ವಿಷಯದ ಬಗ್ಗೆ ತೀರ್ಮಾನಿಸಿ ಸಮವಸ್ತ್ರ ಖರೀದಿ ಮಾಡುತ್ತಾರೆ. ತಮ್ಮ ಇಲಾಖೆಯಿಂದ ಒಂದೇ ಬಣ್ಣದ ಬಟ್ಟೆಯನ್ನು ಖರೀದಿಸಬೇಕೆಂದು ಆದೇಶಿಸಿದರೆ ಬಟ್ಟೆ ವ್ಯಾಪಾರಸ್ಥರು 3 ತಿಂಗಳು ಅವಧಿಯನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳಿಗೆ ಬಟ್ಟೆ ಅಂಗಡಿಯವರೂ ವಿಳಂಬ ಮಾಡುತ್ತಾರೆ. ಮಕ್ಕಳಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಬಟ್ಟೆಯನ್ನು ಕೊಡಬೇಕಾಗುತ್ತದೆ ಎಂದರು.
ಪ್ರಸಕ್ತ ಸಾಲಿನಲ್ಲಿ ರಾಜ್ಯ ಸರಕಾರಿ ಶಾಲೆಗಳಲ್ಲಿ 1ರಿಂದ 8ನೆ ತರಗತಿವರೆಗೂ 38.60 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕೇಂದ್ರ ಸರಕಾರದ ಸಹಭಾಗಿತ್ವದ ಸರ್ವ ಶಿಕ್ಷಣ ಅಭಿಯಾನದಡಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಗರಿಷ್ಠ 300 ರೂ.ಗಳನ್ನು ನೀಡಲಾಗುತ್ತಿದೆ. ಅಲ್ಲದೆ, ಎಸ್‌ಡಿಎಂಸಿಗೆ ತ್ವರಿತವಾಗಿ ಹಣ ಬಿಡುಗಡೆ ಮಾಡುವುದರಿಂದ 2ನೆ ಜತೆ ಸಮವಸ್ತ್ರವನ್ನು ಖರೀದಿಸಿ, ಬಾಕಿ ಉಳಿದ ಮೊತ್ತದಲ್ಲಿ ಸ್ಥಳೀಯ ದರ್ಜಿಗಳಿಂದ ಹಾಗೂ ಸ್ತ್ರೀ ಶಕ್ತಿ ಸಂಘಗಳ ಮುಖಾಂತರ ಸಮವಸ್ತ್ರ ಹೊಲಿಸಿ ಕೊಡುವುದರಿಂದ ಬಡ ಟೈಲರ್‌ಗಳಿಗೂ ನೆರವಾಗುತ್ತದೆ ಎಂದು ಅವರು ಹೇಳಿದರು.







