ಬಿಬಿಎಂಪಿ ಅಧಿಕಾರಕ್ಕಾಗಿ ಜಟಾಪಟಿ

ಬೆಂಗಳೂರು, ಸೆ.15: ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕಾಗಿ ಸೆ.28 ರಂದು ಚುನಾವಣೆ ನಡೆಯಲಿದ್ದು, ಪಾಲಿಕೆಯ ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಟಾಪಟಿ ಆರಂಭಗೊಂಡಿದ್ದು, ಪಕ್ಷೇತರರು ನಿರ್ಣಾಯಕವಾಗಿದ್ದಾರೆ.
ಪಾಲಿಕೆಯಲ್ಲಿ ಅತಿ ಹೆಚ್ಚು ಸ್ಥಾನ ಪಡೆದಿರುವ ಬಿಜೆಪಿ ಪಕ್ಷೇತರರನ್ನು ತನ್ನತ್ತ ಸೆಳೆದು ಚುನಾವಣೆ ಸಂದರ್ಭದಲ್ಲಿ ಅವರನ್ನು ವಿದೇಶಕ್ಕೆ ಪ್ರವಾಸ ಕಳುಹಿಸಿ ಗೈರು ಹಾಜರಾಗುವಂತೆ ನೋಡಿಕೊಂಡು ಪಾಲಿಕೆಯ ಅಧಿಕಾರ ಹಿಡಿಯುವ ಸತತ ಪ್ರಯತ್ನ ಮಾಡುತ್ತಿದೆ. ಈ ಸಂಬಂಧ ನಗರದ ಬಿಜೆಪಿ ಪ್ರಭಾವಿ ಮುಖಂಡರೊಬ್ಬರ ನಿವಾಸದಲ್ಲಿ ಪಕ್ಷೇತರರೊಂದಿಗೆ ಈ ಬಗ್ಗೆ ಗಂಭೀರ ಚರ್ಚೆ ನಡೆದಿದ್ದು, ಅಧಿಕಾರ ಹಂಚಿಕೆ ಬಗ್ಗೆ ಸಹಮತ ವ್ಯಕ್ತವಾಗದೇ, ಬಿಜೆಪಿಗೆ ಹಿನ್ನಡೆಯಾಗಿದೆ ಎಂದು ತಿಳಿದುಬಂದಿದೆ.
ಪಕ್ಷೇತರರೊಂದಿಗೆ ಬಿಜೆಪಿಯವರು ಸಭೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದ ಬೆನ್ನಲ್ಲೇ ಕಾಂಗ್ರೆಸ್ ಪ್ರಭಾವಿ ನಾಯಕ ಶಾಸಕ ರಾಮಲಿಂಗಾರೆಡ್ಡಿ ಶುಕ್ರವಾರ ರಾತ್ರಿಯಿಂದಲೇ ಅಖಾಡಕ್ಕಿಳಿದಿದ್ದಾರೆ. ಶನಿವಾರ ಬೆಳಗ್ಗೆಯಿಂದಲೇ ಖಾಸಗಿ ಹೊಟೇಲ್‌ನಲ್ಲಿ ರಾಮಲಿಂಗಾರೆಡ್ಡಿ ಪಕ್ಷೇತರ ಸದಸ್ಯರೊಂದಿಗೆ ಸುದೀರ್ಘವಾದ ಮಾತುಕತೆ ನಡೆಸಿ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಪಕ್ಷೇತರ ಸದಸ್ಯರು ರಾಮಲಿಂಗಾರೆಡ್ಡಿ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದು, ಅದಕ್ಕೆ ಅವರು ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸತತ ಮೂರು ವರ್ಷದಿಂದ ಅಧಿಕಾರದಿಂದ ದೂರವಿರುವ ಬಿಜೆಪಿ ಈ ಬಾರಿ ಅಧಿಕಾರ ಹಿಡಿಯಲು ಕಸರತ್ತು ನಡೆಸುತ್ತಿದ್ದರೆ, ಇತ್ತ ಮೈತ್ರಿ ಸರಕಾರ ಅಧಿಕಾರ ಉಳಿಸಿಕೊಳ್ಳಲು ಪಕ್ಷೇತರರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಯತ್ನಿಸುತ್ತಿದೆ. ಮೇಯರ್, ಉಪಮೇಯರ್ ಚುನಾವಣೆಗೆ ಪಕ್ಷೇತರರೇ ನಿರ್ಣಾಯಕವಾಗಿದ್ದು, ಎರಡು ರಾಷ್ಟ್ರೀಯ ಪಕ್ಷದ ನಾಯಕರು ಸಾಲು ಸಾಲು ಸಭೆ ನಡೆಸುತ್ತಿದ್ದಾರೆ.
ಎಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ರಾಮಲಿಂಗಾರೆಡ್ಡಿ, ಮೇಯರ್ ಚುನಾವಣೆ ಸಂದರ್ಭದಲ್ಲಿ ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಮತ್ತೊಮ್ಮೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತ ಬಿಬಿಎಂಪಿಯಲ್ಲಿ ಪ್ರತಿಷ್ಠಾಪನೆಯಾಗುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಪಕ್ಷದವರು ಮೇಯರ್ ಆಗಲಿದ್ದು, ಜೆಡಿಎಸ್ ಪಕ್ಷದವರು ಉಪಮೇಯರ್ ಆಗಲಿದ್ದಾರೆ. ಪಕ್ಷೇತರರಿಗೆ ಹೆಚ್ಚಿನ ಅಧಿಕಾರ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾಂಗ್ರೆಸ್‌ನ 2ನೇ ಸಭೆ: ಶಾಸಕ ಆರ್. ಅಶೋಕ್ ಅವರು ಪಕ್ಷೇತರ ಸದಸ್ಯ ರಮೇಶ್, ಗಾಯತ್ರಿ ಸೇರಿದಂತೆ ಐವರ ಜೊತೆ ಗೌಪ್ಯ ಸಭೆ ನಡೆಸಿ ಮೈತ್ರಿ ಸರಕಾರದ ಜೊತೆಗಿರುವವರನ್ನು ತಮ್ಮ ಕಡೆ ಸೆಳೆಯಲು ಯತ್ನಿಸಿದ ಬೆನ್ನಲ್ಲೆ ಶಾಸಕ ರಾಮಲಿಂಗಾರೆಡ್ಡಿ ಖಾಸಗಿ ಹೊಟೇಲ್‌ನಲ್ಲಿ ಏಳುಮಲೈ, ಗಾಯತ್ರಿ, ರಮೇಶ್, ಆನಂದ್, ಚಂದ್ರಪ್ಪ ರೆಡ್ಡಿ, ಲಕ್ಷ್ಮೀ ನಾರಾಯಣ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಸಚಿವ ಕೆ.ಜೆ.ಜಾರ್ಜ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಗವಹಿಸಿದ್ದರು.
ಪಕ್ಷೇತರರೊಂದಿಗೆ ಶಾಸಕ ಆರ್.ಅಶೋಕ್ ಸಭೆ ನಡೆಸಿಲ್ಲ. ಸೆ.28 ರಂದು ಚುನಾವಣೆ ನಡೆಯಲಿದ್ದು, ಮುಂದಿನ ವಾರ ಪಾಲಿಕೆಯ ಬಿಜೆಪಿ ಸದಸ್ಯರು ಸಭೆ ಸೇರಲಿದ್ದೇವೆ. ಪಕ್ಷೇತರರು ಬಿಜೆಪಿಗೆ ಹೋಗುತ್ತಾರೆ ಎಂಬ ಭಯಕ್ಕೆ ಕಾಂಗ್ರೆಸ್ ನಾಯಕರು ಅವರನ್ನು ಹೊಟೇಲ್‌ನಲ್ಲಿಟ್ಟಿದ್ದಾರೆ.
-ಪದ್ಮನಾಭ ರೆಡ್ಡಿ, ಬಿಬಿಎಂಪಿ ವಿಪಕ್ಷ ನಾಯಕ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ಪಕ್ಷೇತರರು ಬೆಂಬಲ ನೀಡಿದ್ದಾರೆ. ಒಂದಿಬ್ಬರು ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲ ನೀಡಬಹುದು. ಆದರೂ, ನಾವೇ ಬಹುಮತದಿಂದ ಪಾಲಿಕೆಯಲ್ಲಿ ಅಧಿಕಾರ ಹಿಡಿಯುತ್ತೇವೆ. ಮೇಯರ್ ಹಾಗೂ ಉಪ ಮೇಯರ್ ಯಾರು ಎಂದು ಇನ್ನೂ ತೀರ್ಮಾನವಾಗಿಲ್ಲ.
-ನೇತ್ರಾ ನಾರಾಯಣ, ಪಾಲಿಕೆ ಜೆಡಿಎಸ್ ನಾಯಕಿ







