ದೇರಳಕಟ್ಟೆ: ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ

ಕೊಣಾಜೆ, ಸೆ. 15: ಮಂಗಳೂರಿಗೆ ಸುಂದರ ಇತಿಹಾಸ ಇದೆ. ಇಲ್ಲಿನ ಭಾಷೆ, ಕನ್ನಡ ಭಾಷೆಯಲ್ಲಿ ಬದ್ಧತೆ ಇರುವ ಜಿಲ್ಲೆ ರಾಜ್ಯದ ಬೇರೆ ಯಾವುದೇ ಭಾಗ ದಲ್ಲೂ ಸಿಗದು. ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮೆಲ್ಲರನ್ನು ಕಾಪಾಡುವ, ಯೋಚಿಸುವಂತೆ ಮಾಡುವ ಭಾಷೆಯ ಸಂಭ್ರಮ ಆಚರಿಸುವಂತೆ ಮಾಡುವ ಕಾರ್ಯವಾಗಿದೆ ಎಂದು ಖ್ಯಾತ ವಿಮರ್ಶಕ, ಮಂಗಳೂರು ವಿವಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಸತ್ಯನಾರಾಯಣ ಮಲ್ಲಿಪಟ್ನ ಅಭಿಪ್ರಾಯಪಟ್ಟರು.
ದೇರಳಕಟ್ಟೆ ವಿದ್ಯಾರತ್ನ ಶಾಲಾ ಸಭಾಂಗಣದಲ್ಲಿ ಶನಿವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕು ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆ ನೆಲದೊಂದಿಗೆ ಊರಿನ ಹೆಸರು ಜೋಡಿಸಿಕೊಂಡಿದೆ. ಜಿಲ್ಲೆಯ ಸಾಹಿತಿಗಳ ಹೆಸರು ಮಕ್ಕಳಿಗೆ ಕಥೆಯಾಗಬೇಕು. ಅಭಿವೃದ್ದಿ ಹೆಸರಲ್ಲಿ ಮಂಗಳೂರು ಕಾಂಕ್ರೀಟೀಕರಣ ಆಗಿದೆ. 250ವರ್ಷಗಳ ಹಿಂದಿನ ಮರಗಳನ್ನು ಕಡಿದು ಹಾಕಲಾಗಿದೆ. ಇಂತಹ ಅಭಿವೃದ್ಧಿ ಮಂಗಳೂರಿಗೆ ಅನಗತ್ಯ ಎಂದರು.
ತುಳು ಭಾಷೆಗೆ ರಾಜಾಶ್ರಯ ಸಿಕ್ಕಿಲ್ಲ. ಅದರ ಪರಿಣಾಮ ಒಳ್ಳೆಯ ಸಾಹಿತ್ಯ ಹೆಚ್ಚಾಗಿ ಹುಟ್ಟಲು ಸಾಧ್ಯವಾಗಿಲ್ಲ. ಇಂದು ಕನ್ನಡವೇ ಸತ್ಯ, ಇಂಗ್ಲೀಷೇ ನಿತ್ಯ ಎನ್ನುವ ಪರಿಸ್ಥಿತಿ ಇದ್ದರೂ ಜಿಲ್ಲೆಯ ಜನ ಕನ್ನಡಕ್ಕೆ ನೀಡಬೇಕಾದ ಎಲ್ಲ ರೀತಿಯ ಮಾನ್ಯತೆ ನೀಡಿದ್ದಾರೆ. ಇತರ ಜಿಲ್ಲೆಯ ಜನರ ಯೋಚನೆಗಿಂತ ಜಿಲ್ಲೆಯ ಜನ ಇಪ್ಪತ್ತು ವರ್ಷ ಹಿಂದೆಯೇ ಯೋಚಿಸಿದ್ದಾರೆ. ಇಲ್ಲಿ ನಾಲ್ಕು ಭಾಷೆ ಮಾತನಾಡುವುದರಿಂದ ಜಿಲ್ಲೆಯ ಜನ ಬುದ್ಧಿವಂತರು ಎನಿಸಿದ್ದಾರೆ. ಇಲ್ಲಿನ ಸಾಹಿತ್ಯ ಅಪರಿಮಿತ ಎಂದು ನುಡಿದರು.
ಸಮಾರೋಪದಲ್ಲಿ ಸಾಹಿತಿ ಕೃಷ್ಣ ಶೆಟ್ಟಿ ಕುಡುಮಲ್ಲಿಗೆ, ನಗರಸಭೆಯ ಮಾಜಿ ಅಧ್ಯಕ್ಷ ಹುಸೈನ್ ಕುಂಞಿ ಮೋನು, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ನಿವೃತ್ತ ಯೋಧ ನಾರಾಯಣ ಕೆ.ಸಿ., ಭಾರತ್ ಸೇವಾದಳದ ಜೂಲಿಯಟ್ ಬಿ.ಪಿಂಟೋ, ಡಾ.ಸಿ.ಲೆನಿಟಾ ಡಿಸೋಜ ಹಾಗೂ ಯೋಗಾಸನ ಶಿಕ್ಷಕ ಬಿ.ಬಾಳಪ್ಪ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು.
ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಯು.ಟಿ. ಖಾದರ್, ಸಮ್ಮೇಳನದ ಸರ್ವಾಧ್ಯಕ್ಷೆ ಹಿರಿಯ ಲೇಖಕಿ ಬಿ.ಎಂ. ರೋಹಿಣಿ, ಸಮ್ಮೇಳನದ ಗೌರವಾಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಉದ್ಯಮಿ ಅಜಿಲಾಡಿಬೀಡು ಭಾಸ್ಕರ ಶೆಟ್ಟಿ, ವಿದ್ಯಾರತ್ನ ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಆರ್. ಶೆಟ್ಟಿ, ಮುಖ್ಯ ಶಿಕ್ಷಕಿ ನಯೀಮ್ ಹಮೀದ್, ಅಬ್ದುಲ್ ಅಝೀಝ್ ಹಕ್, ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯ ಕೃಷ್ಣಪ್ಪ ವಿಜಯಲಕ್ಷ್ಮಿ ಶೆಟ್ಟಿ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್‍ನ ಕೋಶಾಧಿಕಾರಿ ಪ್ರೊ..ಪಿ. ಕೃಷ್ಣ ಮೂರ್ತಿ ಸ್ವಾಗತಿಸಿದರು. ಶಿಕ್ಷಕಿಯರುಗಳಾದ ರಮ್ಯ, ಹೇಮಮಾಲಿನಿ, ಸುಪ್ರಿತಾ ಟಿ., ರವಿಕುಮಾರ್ ಕೋಡಿ, ಪ್ರೀತಿಕಾ, ಭಾರತಿ, ಚೈತ್ರಾ ಸನ್ಮಾನ ಪತ್ರ ವಾಚಿಸಿದರು. ಅಬ್ದುಲ್ ಅಝೀಝ್ ಹಕ್ ವಂದಿಸಿದರು. ರಘು ಇಡ್ಕಿದು ಕಾರ್ಯಕ್ರಮ ನಿರೂಪಿಸಿದರು.
ಸಾಹಿತ್ಯದಿಂದ ಹಲವಾರು ಕ್ರಾಂತಿಕಾರಿ ಬದಲಾವಣೆ ನಡೆದಿವೆ. ವಿದ್ಯಾರ್ಥಿಗಳು, ಯುವಕರಲ್ಲಿ ಸಾಹಿತ್ಯಾಸಕ್ತಿ ಬೆಳೆಸಲು ಸಮ್ಮೇಳನದಿಂದ ಸಾಧ್ಯ. ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುವ ಕಾರ್ಯ ಆಗಬೇಕು'
- ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ







