ಚುನಾವಣೆಗಳಲ್ಲಿ ಹಣದ ಪ್ರಭಾವ ನಿಗ್ರಹಕ್ಕೆ ಸಶಕ್ತ ಕಾನೂನು ಅಗತ್ಯ: ಮುಖ್ಯ ಚುನಾವಣಾಧಿಕಾರಿ ರಾವತ್

ಹೊಸದಿಲ್ಲಿ, ಸೆ.15: ಚುನಾವಣೆಗಳಲ್ಲಿ ಕಪ್ಪುಹಣದ ಪೀಡೆಯನ್ನು ನಿವಾರಿಸುವಲ್ಲಿ ಈಗಿರುವ ಕಾನೂನುಗಳು ವಿಫಲವಾಗಿದ್ದು, ಕೇಂಬ್ರಿಜ್ ಅನಾಲಿಟಿಕದಂತಹ ಮಾಹಿತಿ ಕದಿಯುವ, ಮಾಹಿತಿ ಒದಗಿಸುವ ಹಾಗೂ ನಕಲಿ ಸುದ್ದಿಗಳು ದೇಶದ ಚುನಾವಣಾ ಪ್ರಕ್ರಿಯೆಯ ಮೇಲೆ ತೀವ್ರ ಬೆದರಿಕೆ ಒಡ್ಡಿವೆ. ಚುನಾವಣೆಗಳಲ್ಲಿ ಕಾಳಧನದ ಪ್ರಭಾವವನ್ನು ನಿಯಂತ್ರಿಸಲು ಸಶಕ್ತ ಕಾನೂನಿನ ಅಗತ್ಯವಿದೆ ಎಂದು ಮುಖ್ಯ ಚುನಾವಣಾಧಿಕಾರಿ (ಸಿಇಸಿ) ಒ.ಪಿ.ರಾವತ್ ಹೇಳಿದ್ದಾರೆ.
ದಿಲ್ಲಿಯ ಮುಖ್ಯ ಚುನಾವಣಾ ಅಧಿಕಾರಿಯ ನೇತೃತ್ವದಲ್ಲಿ ನಡೆದ ‘ಭಾರತೀಯ ಚುನಾವಣಾ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಸವಾಲುಗಳು’ ಎಂಬ ವಿಷಯದ ಕುರಿತ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಜಾಪ್ರಭುತ್ವವು ಹುಚ್ಚಾಟಿಕೆಯಲ್ಲ. ಇದಕ್ಕೆ ಧೈರ್ಯ, ಗುಣನಡತೆ, ಸಮಗ್ರತೆ ಮತ್ತು ಜ್ಞಾನದ ಅಗತ್ಯವಿದ್ದು, ಈ ವಿಶೇಷ ಗುಣಗಳು ಇಂದಿನ ದಿನದಲ್ಲಿ ಕಡಿಮೆಯಾಗುತ್ತಿದ್ದು ನಿರ್ನಾಮವಾಗುವ ಅಂಚಿನಲ್ಲಿದೆ ಎಂದರು. ಶುದ್ಧ, ಸ್ವಚ್ಛ ಚುನಾವಣೆ ಎಂಬುದು ದೇಶದ ಜನತೆಗೆ ಹಾಗೂ ನಾಯಕರಿಗೆ ಕಾನೂನುಬದ್ಧತೆಯ ವಸಂತ ಕಾಲ ಇದ್ದಂತೆ ಎಂದು ಬಣ್ಣಿಸಿದ ಅವರು, ಇದು ಕಲುಷಿತಗೊಂಡರೆ ಜನಸಾಮಾನ್ಯರು ವ್ಯವಸ್ಥೆಯ ಬಗ್ಗೆ ಸಿನಿಕರಾಗುತ್ತಾರೆ ಎಂದರು.
ಸುಳ್ಳು ಸುದ್ದಿಗಳ ಪ್ರಮಾಣ ಹೆಚ್ಚಾಗುತ್ತಿದ್ದು, ವಿಷಯವೊಂದನ್ನು ನಂಬುವಂತೆ ಒತ್ತಡ ಹೇರುವುದು, ಮಾಹಿತಿ ಕದಿಯುವುದು, ಕೆಲವರನ್ನೇ ಗುರಿಯಾಗಿಸಿಕೊಂಡು ಸಂವಹನ ನಡೆಸುವುದರಿಂದ ಆರೋಗ್ಯಕರ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತದೆ. ಇಂತಹ ಅಪಾಯ ತೀವ್ರವಾಗಿ ಹೆಚ್ಚುತ್ತಿದ್ದು, ವಿಶ್ವದ ಎಲ್ಲಾ ಪ್ರಜಾಪ್ರಭುತ್ವ ವ್ಯವಸ್ಥೆಯೂ ಈ ಬೆದರಿಕೆಯನ್ನು ಎದುರಿಸುತ್ತಿದೆ ಎಂದರು. ನಮ್ಮ ದೇಶದಲ್ಲಿ ಸೈಬರ್ ಭದ್ರತೆ, ಮಾಹಿತಿಯನ್ನು ಕೇಂಬ್ರಿಜ್ ಅನಾಲಿಟಿಕದಂತಹ ಸಂಸ್ಥೆಗಳು ಕದಿಯದಂತೆ ಎಚ್ಚರ ವಹಿಸುವುದು, ಸಾಮಾಜಿಕ ಮಾಧ್ಯಮ ವೇದಿಕೆ ದುರುಪಯೋಗವಾಗದಂತೆ ತಡೆಯುವುದು, ಸುಳ್ಳು ಸುದ್ದಿ ಪ್ರಸಾರ ಮಾಡದಂತೆ ನಿಗಾ ವಹಿಸುವುದು, ಚುನಾವಣಾ ಪ್ರಕ್ರಿಯೆ, ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ನಡೆಸುವ ವೆಚ್ಚದ ಮೇಲೆ ನಿಗಾ ಇರಿಸುವುದು, ತಂತ್ರಜ್ಞಾನದ ಸಮರ್ಪಕ ಬಳಕೆ ಇತ್ಯಾದಿ ಕಾರ್ಯಗಳನ್ನು ಚುನಾವಣಾ ಆಯೋಗ ನಿರ್ವಹಿಸುತ್ತಿದೆ ಎಂದ ಅವರು, ಮತದಾರರ ಮೇಲೆ ಹಣದ ಆಮಿಷ ಒಡ್ಡುವುದು ಭಾರತೀಯ ಚುನಾವಣೆಗೆ ಎದುರಾಗಿರುವ ಬಹುದೊಡ್ಡ ಕಂಟಕವಾಗಿದೆ ಎಂದರು.
ಮಾಧ್ಯಮಗಳ ಪರಿಣಾಮಕಾರಿ ಬಳಕೆ ಹಾಗೂ ಸುಳ್ಳು ಸುದ್ದಿ ಹಾಗೂ ಪಾವತಿ ಸುದ್ದಿಯನ್ನು ನಿಗ್ರಹಿಸುವ ಬಗ್ಗೆ ಚುನಾವಣಾ ಆಯೋಗ ಯೋಜನೆ ರೂಪಿಸುತ್ತಿದೆ. ಸಾಮಾಜಿಕ ಮಾಧ್ಯಮ ಸೇರಿದಂತೆ ಮಾಧ್ಯಮಗಳ ನಿರ್ವಹಣೆ ಅಧಿಕ ಸವಾಲಿನ ಕಾರ್ಯವಾಗಿದೆ ಎಂದು ರಾವತ್ ಹೇಳಿದರು.







