2019ರಲ್ಲಿ ಸಣ್ಣ ರಾಕೆಟ್ ಉಡಾವಣೆ: ಇಸ್ರೋ ಅಧ್ಯಕ್ಷ
ಚೆನ್ನೈ, ಸೆ. 15: ಸುಮಾರು 500-700 ಕಿ.ಗ್ರಾಂ. ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ತನ್ನ ಮೊದಲ ಸಣ್ಣ ರಾಕೆಟ್ ಅನ್ನು ಇಸ್ರೊ ಮಂದಿನ ವರ್ಷ ಹಾರಿಸುವ ನಿರೀಕ್ಷೆ ಇದೆ. ‘‘500 ಕಿ. ಗ್ರಾಂ. ತೂಕದ ಉಪಗ್ರಹಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿರುವ ಸಣ್ಣ ರಾಕೆಟ್‌ನ ಅಭಿವೃದ್ಧಿ ಕೆಲಸ ನಡೆಯುತ್ತಿದೆ. ಸಣ್ಣ ರಾಕೆಟ್‌ನ ಮೊದಲ ಹಾರಾಟ ಮುಂದಿನ ವರ್ಷ ನಡೆಯಲಿದೆ’’ ಎಂದು ಇಸ್ರೋ ಅಧ್ಯಕ್ಷ ಕೆ. ಸಿವನ್ ತಿಳಿಸಿದ್ದಾರೆ.
ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ರಾಕೆಟ್‌ಪೋರ್ಟ್‌ನಿಂದ ಈ ಸಣ್ಣ ರಾಕೆಟ್ ಅನ್ನು ಉಡಾಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಕಡಿಮೆ ವೆಚ್ಚದ ಸಣ್ಣ ರಾಕೆಟ್‌ಗಳ ಉಡಾವಣೆಗೆ ಸರಳ ಲಂಬ ಉಡಾವಣಾ ಯಾಂತ್ರಿಕ ವ್ಯವಸ್ಥೆ ಹೊಂದಿರುವ ಬದ್ದ ಉಡಾವಣಾ ವೇದಿಕೆ ಅಗತ್ಯವಿದೆ ಎಂದು ಆ್ಯಂಟ್ರಿಕ್ಸ್ ಕಾರ್ಪೋರೇಶನ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ವಹಣಾಧಿಕಾರಿ ಎಸ್. ರಾಕೇಶ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಆದಾಗ್ಯೂ ಎಸ್‌ಎಸ್‌ಎಲ್‌ವಿಯನ್ನು ಆರಂಭದಲ್ಲಿ ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿರುವ ನಮ್ಮ ರೋಕೆಟ್‌ಪೋರ್ಟ್‌ನಿಂದು ಉಡಾಯಿಸಲಾಗುವುದು. ಇದಕ್ಕೆ ಪ್ರತ್ಯೇಕ ಸ್ಪೇಸ್‌ಪೋರ್ಟ್‌ನ ಅಗತ್ಯತೆ ಇದೆ ಎಂದು ರಾಕೇಶ್ ತಿಳಿಸಿದ್ದಾರೆ. ಪ್ರತ್ಯೇಕ ಸ್ಪೇಸ್‌ಪೋರ್ಟ್ ಕುರಿತು ರಾಕೇಶ್ ಅವರ ನಿಲುವುಗಳ ಬಗ್ಗೆ ಪ್ರತಿಕ್ರಿಯಿಸಿರುವ ಸಿವನ್, ಆರಂಭದಲ್ಲಿ ಸಣ್ಣ ರಾಕೆಟ್ ಅನ್ನು ಶ್ರೀಹರಿಕೋಟದಿಂದ ಉಡಾಯಿಸಲಾಗುವುದು. ಭವಿಷ್ಯದಲ್ಲಿ ಆ್ಯಂಟ್ರಿಕ್ಸ್ ತನ್ನದೇ ಆದ ಯೋಜನೆ ಹೊಂದಲಿದೆ ಎಂದರು.





