ವಿಜಯ ಮಲ್ಯಗೆ ಸಂಬಂಧಿಸಿದ ನೋಟಿಸ್‌ನ್ನು ಬದಲಿಸುವ ನಿರ್ಧಾರವನ್ನು ‘ಸೂಕ್ತ ಮಟ್ಟ’ದಲ್ಲಿ ಕೈಗೊಳ್ಳಲಾಗಿತ್ತು: ಸಿಬಿಐ

ಹೊಸದಿಲ್ಲಿ,ಸೆ.15: ದೇಶಭ್ರಷ್ಟ ಮದ್ಯದ ದೊರೆ ವಿಜಯ ಮಲ್ಯ ಪರಾರಿಯಾಗಲು ಅವಕಾಶ ನೀಡಿದ್ದರೆಂಬ ಆರೋಪಗಳ ವಿರುದ್ಧ ತನ್ನ ಜಂಟಿ ನಿರ್ದೇಶಕ ಎ.ಕೆ.ಶರ್ಮಾ ಅವರನ್ನು ಸಿಬಿಐ ಸಮರ್ಥಿಸಿಕೊಂಡಿದೆ. ಮಲ್ಯ ವಿರುದ್ಧದ ಲುಕ್ ಔಟ್ ನೋಟಿಸ್‌ನ್ನು ಓರ್ವ ವ್ಯಕ್ತಿ ಬದಲಿಸಿದ್ದಲ್ಲ,ಆ ನಿರ್ಧಾರವನ್ನು ಸೂಕ್ತ ಮಟ್ಟದಲ್ಲಿ ತೆಗೆದುಕೊಳ್ಳಲಾಗಿತ್ತು ಎಂದು ಸಿಬಿಐ ವಕ್ತಾರ ಅಭಿಷೇಕ ದಯಾಳ್ ಅವರು ಶನಿವಾರ ಇಲ್ಲಿ ತಿಳಿಸಿದರು.
ಶರ್ಮಾ ವಿರುದ್ಧದ ಆರೋಪಗಳು ಆಧಾರರಹಿತ ಎಂದು ಬಣ್ಣಿಸಿದ ಅವರು,ಮಲ್ಯ ಅವರನ್ನು ಬಂಧಿಸಲು ಅಥವಾ ವಶಕ್ಕೆ ತೆಗೆದುಕೊಳ್ಳಲು ಸಾಕಷ್ಟು ಕಾರಣಗಳಿರಲಿಲ್ಲವಾದ್ದರಿಂದ ಅವರ ವಿರುದ್ಧದ ನೋಟಿಸ್‌ನಲ್ಲಿ ಬದಲಾವಣೆಗಳನ್ನು ಮಾಡಲಾಗಿತ್ತು ಎಂದು ನಾವು ಹಲವಾರು ಬಾರಿ ಉಲ್ಲೇಖಿಸಿದ್ದೇವೆ ಎಂದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಶರ್ಮಾ ವಿರುದ್ಧ ಆರೋಪಗಳನ್ನು ಮಾಡಿರುವ ಬೆನ್ನಲ್ಲೇ ಸಿಬಿಐನ ಈ ಸಮಜಾಯಿಷಿ ಹೊರಗೆ ಬಿದ್ದಿದೆ.
ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಮಲ್ಯ ದೇಶ ತೊರೆಯಲು ನೆರವಾಗುವ ಮೂಲಕ ಅವರೊಂದಿಗೆ ಕೈ ಜೋಡಿಸಿದ್ದರು ಎಂದು ಇತ್ತೀಚಿಗೆ ಆರೋಪಿಸಿದ್ದ ರಾಹುಲ್,ಅವರ ರಾಜೀನಾಮೆಗೆ ಆಗ್ರಹಿಸಿದ್ದರು. ಮಲ್ಯ ದೇಶವನ್ನು ತೊರೆಯುವ ಮುನ್ನ ಸಂಸತ್‌ನಲ್ಲಿ ಜೇಟ್ಲಿ ಜೊತೆಗೆ 15 ನಿಮಿಷಗಳ ಕಾಲ ಮಾತನಾಡಿದ್ದರು ಎಂದು ಕಾಂಗ್ರೆಸ್ ನಾಯಕ ಪಿ.ಎಲ್.ಪುನಿಯಾ ಅವರೂ ಪ್ರತಿಪಾದಿಸಿದ್ದರು.
ಬ್ರಿಟನ್ನಿನ ನ್ಯಾಯಾಲಯದ ಹೊರಗೆ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಮಲ್ಯ,ತನಗೆ ಜಿನಿವಾದಲ್ಲಿ ನಿಗದಿತ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಭಾರತವನ್ನು ತೊರೆಯುವ ಮುನ್ನ ತಾನು ಜೇಟ್ಲಿಯವರನ್ನು ಭೇಟಿಯಾಗಿದ್ದೆ ಮತ್ತು ಬ್ಯಾಂಕುಗಳ ಸಾಲ ಇತ್ಯರ್ಥಗೊಳಿಸಲು ಸಿದ್ಧ ಎಂದು ಪುನರುಚ್ಚರಿಸಿದ್ದೆ ಎಂದು ಹೇಳಿದ್ದರು.







