ಬೆಂಗಳೂರು: ಆತ್ಮಹತ್ಯೆಗೆ ಶರಣಾದ ಅತ್ತೆ-ಸೊಸೆ; ನಾಲ್ಕು ದಿನಗಳ ನಂತರ ಘಟನೆ ಬೆಳಕಿಗೆ

ಬೆಂಗಳೂರು, ಸೆ.16: ಅನಾರೋಗ್ಯದಿಂದ ಟೈಲರೊಬ್ಬರು ಸಾವನ್ನಪ್ಪಿದ ಕಾರಣ ನೊಂದು ಅವರ ಪತ್ನಿ ಹಾಗೂ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಇಲ್ಲಿನ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮುತ್ಯಾಲನಗರದ 18ನೆ ಕ್ರಾಸ್, 12ನೆ ಎಫ್‌ಮೈನ್ ನಿವಾಸಿ ಶೇಷಪಾಣಿ (44) ಎಂಬುವರು ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಇದರಿಂದ ನೊಂದು ಅವರ ಪತ್ನಿ ಉಷಾ ನಂದಿನಿ (42) ಹಾಗೂ ತಾಯಿ ಲಕ್ಷ್ಮೀದೇವಿ (65) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಶೇಷಪಾಣಿ ಮತ್ತು ಉಷಾ ನಂದಿನಿ ದಂಪತಿಗೆ ಮಕ್ಕಳಿರಲಿಲ್ಲ. ತಾಯಿ ಜೊತೆ ಮೂವರು ಒಂದೇ ಮನೆಯಲ್ಲಿ ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಶೇಷಪಾಣಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ನಾಲ್ಕು ದಿನಗಳ ಹಿಂದೆ ಮನೆಯಲ್ಲೇ ಮೃತಪಟ್ಟಿದ್ದಾರೆ. ಆದರೆ ಈ ವಿಷಯವನ್ನು ಯಾರಿಗೂ ತಿಳಿಸಿರಲಿಲ್ಲ. ಮೃತದೇಹ ಮನೆಯಲ್ಲೇ ಇತ್ತು. ಅವರ ಸಾವಿನಿಂದ ತೀವ್ರ ಆಘಾತಕ್ಕೊಳಗಾದ ಪತ್ನಿ ಮತ್ತು ತಾಯಿ, ದಿಕ್ಕುತೋಚದಂತಾಗಿ ಅದೇ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮನೆಯಿಂದ ವಾಸನೆ ಬರುತ್ತಿದ್ದುದನ್ನು ಗಮನಿಸಿದ ಅಕ್ಕಪಕ್ಕದ ನಿವಾಸಿಗಳು ಶನಿವಾರ ಈ ಬಗ್ಗೆ ಯಶವಂತಪುರ ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಬಂದು ಪರಿಶೀಲಿಸಿದಾಗ ಮೂವರ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.





