ಆಂತರಿಕ ಕಚ್ಚಾಟದಿಂದಲೇ ಸಮ್ಮಿಶ್ರ ಸರ್ಕಾರ ಪತನವಾಗುತ್ತದೆ: ಶಾಸಕ ಎಂ.ಪಿ ರೇಣುಕಾಚಾರ್ಯ

ದಾವಣಗೆರೆ,ಸೆ.16: ಸಮ್ಮಿಶ್ರ ಸರ್ಕಾರದಲ್ಲಿನ ಆಂತರಿಕ ಕಚ್ಚಾಟದಿಂದ ಸರ್ಕಾರ ಪತನವಾಗುತ್ತದೆಯೇ ಹೊರತು ಅದಕ್ಕೆ ಬಿಜೆಪಿ ಅಪರೇಷನ್ ಮಾಡುವ ಅಗತ್ಯವಿಲ್ಲ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಈಶ್ವರ್ ಖಂಡ್ರೆ ಅವರು ಪದೇ ಪದೇ ಬಿಜೆಪಿ ಕಿಂಗ್‍ಪಿನ್‍ಗಳು ಸಮ್ಮಿಶ್ರ ಸರ್ಕಾರ ಉರುಳಿಸಲು ಅಪರೇಷನ್ ಕಮಲ ನಡೆಸುತ್ತಿದ್ದಾರೆ ಎಂದು ಆರೋಪಿಸುವುದು ಸರಿಯಲ್ಲ. ಬಿಜೆಪಿಗೆ ಅಪರೇಷನ್ ಕಮಲ ಮಾಡುವ ಅವಶ್ಯಕತೆ ಇಲ್ಲ. ಅಲ್ಲದೆ, ಕಾಂಗ್ರೆಸ್‍ನವರೇ ಅಪರೇಷನ್ ಮೂಲಕ ಬಿಜೆಪಿಗೆ ಗಾಳಹಾಕುವ ಯತ್ನ ನಡೆಸುತ್ತಿದ್ದಾರೆ. ಆದರೆ, ಬಿಜೆಪಿಯಿಂದ ಯಾರೊಬ್ಬರೂ ಹೊರಹೋಗುವುದಿಲ್ಲ ಎಂದರು.
ಬಿಜೆಪಿ ಕಿಂಗ್‍ಪಿನ್‍ಗಳು ಸಮ್ಮಿಶ್ರ ಸರ್ಕಾರದ ಕೆಲ ಶಾಸಕರಿಗೆ ತಲಾ 10 ಕೋಟಿ ನೀಡಿ ಅಪರೇಷನ್ ಕಮಲಕ್ಕೆ ಅಣಿಯಾಗಿದ್ದಾರೆ ಎಂದು ಆರೋಪಿಸುವವರು, ತಾಕತ್ತಿದ್ದರೆ ಅಂತಹವರ ಹೆಸರನ್ನು ಬಹಿರಂಗಪಡಿಸಬೇಕು. ಇಲ್ಲವೇ ಆರೂವರೆ ಕೋಟಿ ಕನ್ನಡಿಗರ ಕ್ಷಮೆ ಯಾಚಿಸಲಿ ಎಂದು ಆಗ್ರಹಿಸಿದರು.
ಸಮ್ಮಿಶ್ರ ಸರ್ಕಾರ ರಾಜ್ಯದ ಜನರಿಗೆ ಟೋಪಿ ಹಾಕುವ ಕಾರ್ಯ ಮಾಡುತ್ತಿದೆ. ಮೊಸಳೆ ಕಣ್ಣೀರಿನ ಮೂಲಕ ರಾಜ್ಯದ ಜನರಿಗೆ ಮಂಕುಬೂದಿ ಎರಚುತ್ತಿರುವ ಸಿಎಂ ಕುಮಾರಸ್ವಾಮಿ ಕುಟುಂಬಕ್ಕೆ ನಾಚಿಕೆಯಾಗಬೇಕು. ಅಧಿಕಾರಕ್ಕಾಗಿ ಮಾಜಿ ಪ್ರಧಾನಿ ದೇವೇಗೌಡರು ಎಲ್ಲರಿಗೂ ತೊಂದರೆ ಕೊಟ್ಟಿದ್ದಾರೆ. ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಬಚ್ಚೇಗೌಡ, ಬೈರೇಗೌಡ ಸೇರಿದಂತೆ ಅನೇಕರಿಗೆ ಅವಮಾನ, ತೊಂದರೆ ಕೊಟ್ಟಿದ್ದಾರೆ. ಆದರೆ ಬಿಎಸ್ ಯಡಿಯೂರಪ್ಪ ಕಲ್ಲುಬಂಡೆಯಿದ್ದಂತೆ, ಅವರಿಗೆ ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ದೇವೇಗೌಡರಿಗೆ ಟಾಂಗ್ ನೀಡಿದರು.
ಕಾಂಗ್ರೆಸ್, ಜೆಡಿಎಸ್‍ನಲ್ಲಿರುವ ಶಾಸಕರೆಲ್ಲಾ ರೌಡಿಗಳು, ಮಾಫಿಯ ಡಾನ್‍ಗಳು. ಇವರ ಮುಖಂಡ ಸಿಎಂಗೆ ನಾಚಿಗೆಯಾಗಬೇಕು. ನಿನ್ನೆಯವರೆಗೂ ಕೋಮಾದಲ್ಲಿದ್ದ ರಾಜ್ಯ ಸಮ್ಮಿಶ್ರ ಸರ್ಕಾರ ಇಂದು ಸಂಪೂರ್ಣ ಸತ್ತಿದೆ. ಸಿಎಂ ಕುಮಾರಸ್ವಾಮಿಗೆ ನೈತಿಕತೆ ಎಂಬುದಿದ್ದರೆ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಅವರು, ಸಿಎಂ ಸಹೋದರ ರೇವಣ್ಣ ಕಂಡಕಂಡಲ್ಲೆಲ್ಲಾ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಹಣ ಲೂಟಿಗೆ ಇಳಿದಿದ್ದಾರೆ. ರೈತನ ಮಕ್ಕಳೆಂದು ಬಿಂಬಿಸಿಕೊಳ್ಳುವ ದೇವೇಗೌಡ ಕುಟುಂಬಕ್ಕೆ ರೈತ ಖಾತೆ ಬೇಕಾಗಿಲ್ಲ. ಬದಲಿಗೆ, ಪಿಡಬ್ಲುಡಿ, ವಿದ್ಯುತ್ ಖಾತೆಗಳೇ ಬೇಕು ಎಂದು ವ್ಯಂಗವಾಡಿದರು.
ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಬಗ್ಗೆ ನನಗೆ ಗೌರವವಿದೆ. ಬಿಜೆಪಿ ಬಗ್ಗೆ ಅವರು ಕ್ಷುಲ್ಲಕವಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಅವರು ಕ್ಷುಲ್ಲಕ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಪ್ರೊ. ಲಿಂಗಣ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎನ್. ಶಿವಕುಮಾರ್, ಶ್ರೀನಿವಾಸ್,ನಾಗರಾಜ್, ರಾಜುವೀರಣ್ಣ, ಧನುಷ್‍ರೆಡ್ಡಿ, ಬಸವರಾಜ್ ಇದ್ದರು.







