‘ನಾನು ಅವರ ಅತ್ತೆ ಅಲ್ಲ’ ಎಂದ ಮಾಯಾವತಿ
ಚಂದ್ರಶೇಖರ ಆಝಾದ್ ವಿರುದ್ಧ ವಾಗ್ದಾಳಿ

ಲಕ್ನೋ, ಸೆ. 16: ನಾನು ಅವರ ಅತ್ತೆ ಅಲ್ಲ ಎಂದು ಹೇಳುವ ಮೂಲಕ ಬಿಎಸ್ಪಿ ವರಿಷ್ಠೆ ಮಾಯಾವತಿ ಭೀಮ್ ಆರ್ಮಿಯ ಅಧ್ಯಕ್ಷ ಅಝಾದ್ ಚಂದ್ರಶೇಖರ್ ವಿರುದ್ಧ ರವಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಲಕ್ನೋದ ಮಾಲ್ ಅವೆನ್ಯೂನಲ್ಲಿರುವ ತನ್ನ ನೂತನ ಮನೆಯಲ್ಲಿ ರವಿವಾರ ಮಾತನಾಡಿದ ಅವರು, ಇತ್ತೀಚೆಗೆ ಕಾರಾಗೃಹದಿಂದ ಬಿಡುಗಡೆಯಾದ ವ್ಯಕ್ತಿಯೊಬ್ಬರು ತನ್ನನ್ನು ಅತ್ತೆ ಎಂದು ಕಳೆದ ಕೆಲವು ದಿನಗಳಿಂದ ಕರೆಯುತ್ತಿದ್ದಾರೆ ಎಂದಿದ್ದಾರೆ.
ತಾನು ಇಂತಹ ಜನರೊಂದಿಗೆ ಎಂದಿಗೂ ಸಂಬಂಧ ಇರಿಸಿಕೊಳ್ಳಲು ಸಾಧ್ಯವಿಲ್ಲ. ಹಿಂಸಾಚಾರ ಪ್ರಕರಣದಲ್ಲಿ ಜೈಲು ಸೇರಿದ ಹಾಗೂ ಬಿಎಸ್ಪಿ ವಿರುದ್ಧ ಕಾರ್ಯತಂತ್ರ ನಡೆಸಲು ಬಿಡುಗಡೆಗೊಂಡ ಇಂತಹ ವ್ಯಕ್ತಿಗಳೊಂದಿಗೆ ತಾನು ಅಥವಾ ತನ್ನ ಪಕ್ಷ ಎಂದಿಗೂ ಸಂಬಂಧ ಹೊಂದಲಾರದು ಎಂದು ಅವರು ಹೇಳಿದ್ದಾರೆ.
ಒಂದು ವೇಳೆ ಜನರು ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಕಾನ್ಶಿರಾಮ್ ಅವರು ತೋರಿಸಿ ಪಥವನ್ನು ಅನುಸರಿಸುವುದಾದರೆ, ಪ್ರತ್ಯೇಕ ಸಂಘಟನೆ ರೂಪಿಸುವುದರ ಬದಲು ಬಿಎಸ್ಪಿ ಚಳವಳಿಯನ್ನು ಮುಂದಕ್ಕೊಯ್ಯಲು ಬೆಂಬಲ ನೀಡಲಿದೆ ಎಂದು ಮಾಯಾವತಿ ಹೇಳಿದ್ದಾರೆ.





