ಮಂಡ್ಯ: ಪ್ರತ್ಯೇಕ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ; ಐವರಿಗೆ ಗಾಯ
ಮಂಡ್ಯ, ಸೆ.17: ಜಿಲ್ಲೆಯ ಎರಡು ಕಡೆ ನಡೆದಿರುವ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿ, ಸುಮಾರು ಐದು ಮಂದಿ ಗಾಯಗೊಂಡಿದ್ದಾರೆ. ಹಲವು ವಾಹನಗಳು ಜಖಂಗೊಂಡಿವೆ.
ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಹೆದ್ದಾರಿಯಲ್ಲಿ ಬೈಕ್‍ಗೆ ಅಪರಿಚಿತ ವಾಹನ ಢಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದರೆ, ನಾಲ್ಕು ಮಂದಿ ಪಾದಚಾರಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಸಾವಿಗೀಡಾದ ಬೈಕ್ ಸವಾರ ಮೈಸೂರಿನ ಒಂಟಿಕೊಪ್ಪಲಿನ ಅರ್ಜುನ್ ಎಂದು ಹೇಳಲಾಗಿದ್ದು, ಈ ಸಂದರ್ಭದಲ್ಲಿ ಸರಣಿ ಅಪಘಾತವಾದ ಹಿನ್ನೆಲೆಯಲ್ಲಿ ಐದಾರು ಕಾರು, ಲಾರಿ ಜಖಂಗೊಂಡಿವೆ ಎಂದು ಶ್ರೀರಂಗಪಟ್ಟಣ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಪ್ರಕರಣದ ಮದ್ದೂರು ತಾಲೂಕು ಕೆ.ಎಂ.ದೊಡ್ಡಿಯಲ್ಲಿ ನಡೆದಿದೆ. ಕಾರು ಢಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿ, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಕೆ.ಎಂ.ದೊಡ್ಡಿಯ ವಿಜಯ್ ಸಾವಿಗೀಡಾಗಿದ್ದು, ತೀವ್ರವಾಗಿ ಗಾಗಯೊಂಡಿರುವ ಶಿವು ಮತ್ತು ಸುನಿಲ್ ಅವರನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ ಎಂದು ಕೆ.ಎಂ.ದೊಡ್ಡಿ ಪೊಲೀಸರು ತಿಳಿಸಿದ್ದಾರೆ.