ಉಡುಪಿ: ರಾಜ್ಯ ಕೃಷಿ ಸಾಲಮನ್ನಾದ ಮಾರ್ಗಸೂಚಿ ವಿರೋಧಿಸಿ ಧರಣಿ

ಉಡುಪಿ, ಸೆ.18: ರಾಜ್ಯ ಸರಕಾರದ ಕೃಷಿ ಸಾಲ ಮನ್ನಾದ ಮಾರ್ಗಸೂಚಿ ಯನ್ನು ವಿರೋಧಿಸಿ ಸಹಕಾರ ಭಾರತಿ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಮಂಗಳ ವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಲಾಯಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಸಹಕಾರ ಭಾರತಿಯ ರಾಜ್ಯ ಸಹಸಂಘ ಟನಾ ಪ್ರಮುಖ ಹರೀಶ್ ಆಚಾರ್ಯ, ರೈತರ ನಿರಖು ಠೇವಣಿಯನ್ನು ಸಾಲದ ಖಾತೆಗೆ ವಜಾ ಮಾಡುವ ಸರಕಾರದ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯ ಬೇಕು. ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿರುವ ಕೃಷಿಕರ ಸಾಲ ಮನ್ನಾದ ಬಗ್ಗೆ ತಕ್ಷಣ ಅಧಿಸೂಚನೆ ಹೊರಡಿಸಬೇಕು. ಸಾಲಮನ್ನಾದ ಬಗ್ಗೆ ಸಹಕಾರಿ ಧುರೀಣರು ಮತ್ತು ಕೃಷಿಕರ ಸಭೆ ಕರೆದು ಅಭಿಪ್ರಾಯ ಪಡೆಯಬೇಕು ಎಂದು ಒತ್ತಾಯಿಸಿದರು.
ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ರವಿರಾಜ್ ಹೆಗ್ಡೆ ಮಾತನಾಡಿ, ಜಿಲ್ಲೆ ಯಲ್ಲಿ 22,517 ಮಂದಿ ರೈತರು 250 ಕೋಟಿ ರೂ. ಕೃಷಿ ಸಾಲ ಮಾಡಿದ್ದು, ಇದರಲ್ಲಿ 234.15 ಕೋಟಿ ರೂ. ಬೆಳೆಸಾಲ ಪಾವತಿಯಾಗಬೇಕಾಗಿದೆ. ಸರಕಾರ ಒಂದು ಲಕ್ಷ ರೂ. ಸಾಲಮನ್ನಾ ಮಾಡಿದರೆ 162.11 ಕೋಟಿ ರೂ.ನಷ್ಟು ಮಾತ್ರವೇ ಸಾಲ ಮನ್ನಾವಾಗಲಿದೆ. ಈ ಪೈಕಿ 15ರಿಂದ 16 ಸಾವಿರ ರೈತರಿಗೆ ಮಾತ್ರವೇ ಪ್ರಯೋಜನ ದೊರೆಯುತ್ತದೆ. ಸರಕಾರದ ಈ ಧೋರಣೆ ಯಿಂದ ಉಳಿದ ರೈತರಿಗೆ ಅನ್ಯಾಯವಾಗಲಿದೆ ಎಂದರು.
ಬಳಿಕ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಹಕಾರ ಭಾರತಿ ರಾಜ್ಯ ಮಹಿಳಾ ಪ್ರಮುಖ ಸುಮಾನ್ ಶರಣ್, ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮಧುಸೂದನ್ ನಾಯಕ್, ಮಂಜುನಾಥ್ ಎಸ್.ಕೆ., ಚೇರ್ಕಾಡಿ ಅಶೋಕ್ ಕುಮಾರ್ ಶೆಟ್ಟಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕಾ ೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಕಟಪಾಡಿ ಶಂಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.







