ಹಾಸನ: ತ್ರಿಭುವನ್ ಪ್ರಿಂಟರ್ಸ್ ಮಾಲಕ ಬಿ.ಎಂ ವೀರಾಜು ನಿಧನ
ಹಾಸನ,ಸೆ.19: ನಗರದ ತ್ರಿಭುವನ್ ಪ್ರಿಂಟರ್ಸ್ ಮಾಲಕ ಬಿ.ಎಂ ವೀರಾಜು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಮೃತರಿಗೆ 52 ವರ್ಷ ವಯಸ್ಸಾಗಿತ್ತು.
ಚಿಕಿತ್ಸೆಗೆಂದು ಬೆಂಗಳೂರಿಗೆ ತೆರಳುತ್ತಿದ್ದಾಗ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಅಂಬ್ಯುಲೆನ್ಸ್ ನಲ್ಲಿ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಷ್ಟರಲ್ಲೇ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತೆನ್ನಲಾಗಿದೆ. ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು, ವರ್ಗದವರನ್ನು ಅಗಲಿರುವ ಇವರು ಹಾಸನ ಜಿಲ್ಲಾ ಮುದ್ರಣಕಾರರ ಸಂಘದ ಹಾಲಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಹಾಸನ ಜಿಲ್ಲಾ ವೀರಶೈವ ಸಂಘದ ಅಧ್ಯಕ್ಷ ಬಿ.ಪಿ. ಐಸಾಮಿಗೌಡ ಮತ್ತು ಸಂಘದ ನಿರ್ದೇಶಕರು, ಜಿಲ್ಲಾ ಮುದ್ರಣಕಾರರ ಸಂಘದ ಅಧ್ಯಕ್ಷ ಮಂಜೇಗೌಡ ಮತ್ತು ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಅಪಾರ ಅಭಿಮಾನಿಗಳು ಹೇಮಾವತಿ ನಗರದ ಮೃತರ ನಿವಾಸದ ಬಳಿ ಮೃತರ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಬಳಿಕ ಮೃತರ ಹುಟ್ಟೂರಾದ ಸಕಲೇಶಪುರ ತಾಲೂಕು ಬಾಗೆ ಗ್ರಾಮಕ್ಕೆ ಮೃತದೇಹ ಕೊಂಡೊಯ್ಯಲಾಯಿತು.
ಮೃತರ ಗೌರವಾರ್ಥ ನಗರದ ಬಹುತೇಕ ಮುದ್ರಣಾಲಯಗಳು ಮುಚ್ಚಲ್ಪಟ್ಟಿದ್ದವು. ಮಂಗಳವಾರ ಸಂಜೆ ಮೃತರ ಅಂತ್ಯಕ್ರಿಯೆಯನ್ನು ಬಾಗೆ ಗ್ರಾಮದಲ್ಲಿ ನೆರವೇರಿಸಲಾಯಿತು.