ಕೊಳ್ಳೇಗಾಲ: ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ
ಕೊಳ್ಳೇಗಾಲ.ಸೆ.19: ಸಾಲಬಾಧೆ ತಾಳಲಾರದೆ ರೈತರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಾಣಾಗಿರುವ ಘಟನೆ ಬುಧವಾರ ತಾಲೂಕಿನ ತೇರಂಬಳ್ಳಿ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ತೇರಂಬಳ್ಳಿ ಗ್ರಾಮದ ಲೇ.ಪುಟ್ಟಸ್ವಾಮಿಪ್ಪ ಮಗನಾದ ಲೋಕೇಶ್(40) ಸಾವಿಗೀಡಾದ ರೈತ.
ಮೃತ ರೈತ ತನ್ನ ಮನೆ ನಿರ್ವಹಣೆ ಮತ್ತು ತಂಗಿ, ತಮ್ಮಂದಿರ ಮದುವೆ ಮಾಡಿಸುವ ಸಲುವಾಗಿ 1 ಲಕ್ಷದವರೆಗೆ ಚಿನ್ನ ಗಿರವಿ ಇಟ್ಟಿರುವುದು ಸೇರಿ ಕೈಸಾಲ ಒಟ್ಟು 4 ಲಕ್ಷ ಸಾಲ ಮಾಡಿದ್ದರು. ಕಳೆದ 6 ತಿಂಗಳ ಹಿಂದೆ ಜಮೀನನ್ನು ಭೋಗ್ಯಕ್ಕೆ ಹಾಕಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಕೃಷಿ ಇಲ್ಲದ ಬದುಕನ್ನು ನಡೆಸಲು ಸಾಧ್ಯವಾಗದೇ ಜೀವನದಲ್ಲಿ ಜಿಗುಪ್ಸೆಗೊಂಡ ಅವರು ನಿನ್ನೆ ಸ್ವಗ್ರಾಮಕ್ಕೆ ಆಗಮಿಸಿದ ತಡರಾತ್ರಿ ವೇಳೆ ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಈ ಸಂಬಂಧ ಮೃತರ ಪತ್ನಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸ್ಥಳಕ್ಕೆ ಉಪನಿರೀಕ್ಷಕ ವನರಾಜು ಹಾಗೂ ಸಿಬ್ಬಂದಿಗಳು ಭೇಟಿ ನೀಡಿದರು. ಪಟ್ಟಣದ ಸರ್ಕಾರಿ ಉಪವಿಭಾಗ ಆಸ್ಪತ್ರೆಯ ಶವಾಗಾರದಲ್ಲಿ ಸರ್ಕಾರಿ ವೈದ್ಯಾಧಿಕಾರಿ ಡಾ.ನಾರಾಯಣ್ರವರಿಂದ ಶವಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಒಪ್ಪಿಸಲಾಯಿತು.