ಬಿಹಾರ ಆಶ್ರಮ ಪ್ರಕರಣ: ಮಾಜಿ ಸಚಿವರ ತನಿಖೆ ನಡೆಸುವಂತೆ ಪೊಲೀಸರಿಗೆ ಸುಪ್ರೀಂ ಸೂಚನೆ

ಹೊಸದಿಲ್ಲಿ, ಸೆ.20: ಅಪಾರ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವೆ ಮಂಜು ವರ್ಮಾ ಹಾಗೂ ಆಕೆಯ ಪತಿ ಚಂದ್ರಶೇಖರ ವರ್ಮಾ ಅವರನ್ನು ತನಿಖೆಗೊಳಪಡಿಸುವಂತೆ ಬಿಹಾರ ಪೊಲೀಸರಿಗೆ ಸರ್ವೋಚ್ಚ ನ್ಯಾಯಾಲಯ ಗುರುವಾರ ಸೂಚಿಸಿದೆ.
ಮುಝಫ್ಫರ್‌ಪುರದ ಆಶ್ರಮಗೃಹದಲ್ಲಿ ನಡೆದ ಯುವತಿಯರ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಬಿಹಾರ ಸರಕಾರದಲ್ಲಿ ಸಮಾಜ ಕಲ್ಯಾಣ ಸಚಿವೆಯಾಗಿದ್ದ ಮಂಜು ವರ್ಮಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಚಂದ್ರಶೇಖರ ವರ್ಮಾ ಹಾಗೂ ಅವರ ಪತ್ನಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದರು ಎಂದು ಪ್ರಕರಣದ ತನಿಖೆ ನಡೆಸುತ್ತಿದ್ದ ಸಿಬಿಐ ತನ್ನ ಸ್ಥಿತಿಗತಿ ವರದಿಯಲ್ಲಿ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ. ಪ್ರಕರಣದ ತನಿಖೆಯು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿರುವ, ನ್ಯಾಯಾಧೀಶ ಎಂ.ಬಿ.ಲೊಕುರ್ ಮತ್ತು ದೀಪಕ್ ಗುಪ್ತಾ ಅವರ ಪೀಠ, ಆಶ್ರಮಗೃಹ ಮತ್ತು ಅದರ ಮಾಲಕ ಬ್ರಿಜೇಶ್ ಠಾಕೂರ್‌ನ ಸಂಪತ್ತಿನ ಬಗ್ಗೆ ತನಿಖೆ ನಡೆಸುವಂತೆ ಆದಾಯ ತೆರಿಗೆ ಇಲಾಖೆಗೆ ಆದೇಶಿಸಿದೆ.





