ಏಳಿಗೆಯಲ್ಲಿ ಮುಸ್ಲಿಮರು ಹಿಂದೆ; ದಲಿತರು ಮುಂದೆ
ಚಲನಶೀಲತೆ ಸೂಚ್ಯಂಕದ ವರದಿಯಲ್ಲಿ ಉಲ್ಲೇಖ

ಹೊಸದಿಲ್ಲಿ, ಸೆ.21: ಅಂತರ್‌ಪೀಳಿಗೆಯ(ಪೀಳಿಗೆಯಿಂದ ಪೀಳಿಗೆಗೆ) ಸ್ಥಾನಮಾನದ ಬದಲಾವಣೆ ಅಥವಾ ಏಳಿಗೆಯನ್ನು ಸೂಚಿಸುವ ಚಲನಶೀಲತೆ ಸೂಚ್ಯಂಕದ ಪ್ರಕಾರ ಮುಸ್ಲಿಮರ ಸ್ಥಿತಿ ಇಳಿಮುಖವಾಗಿದ್ದರೆ ದಲಿತರು ಉತ್ತಮ ಸಾಧನೆ ತೋರಿದ್ದಾರೆ ಎಂದು ಅಧ್ಯಯನದ ವರದಿಯೊಂದರಲ್ಲಿ ತಿಳಿಸಲಾಗಿದೆ.
ಆದರೆ ಕೇವಲ ಆರ್ಥಿಕ ಅಂಕಿಅಂಶ ಹಾಗೂ ಶೈಕ್ಷಣಿಕ ಸೂಚನೆಗಳನ್ನು ಮಾತ್ರ ಚಲನಶೀಲತೆಯ ಸ್ಥಾನಮಾನದ ಸೂಚನೆ ಅಥವಾ ಏಳಿಗೆಯ ಸೂಚನೆಯೆಂದು ಗಮನಿಸುವುದು ಅಪಾಯಕಾರಿ ಎಂದು ವರದಿಯಲ್ಲಿ ತಿಳಿಸಲಾಗಿದೆ. ಶಿಕ್ಷಣ ಮತ್ತು ಆದಾಯದತ್ತ ಗಮನ ಹರಿಸಿದರೆ ಭಾರತದಲ್ಲಿ ಅಲ್ಪಪ್ರಮಾಣದ ಅಂತರ್ ಪೀಳಿಗೆಯ ಏಳಿಗೆ (ಪೋಷಕರಿಂದ ಮಗುವಿಗೆ ಮೇಲ್ಮುಖ ಚಲನಶೀಲತೆ) ಕಂಡುಬಂದಿದೆ. ಅಂತರ್‌ಪೀಳಿಗೆಯ ಏಳಿಗೆಯ ಸೂಚ್ಯಂಕದಲ್ಲಿ ಮುಸ್ಲಿಮರು ಅತೀ ಹೆಚ್ಚು ನಷ್ಟಕ್ಕೊಳಗಾಗಿದ್ದರೆ ಎಸ್ಸಿ ಮತ್ತು ಎಸ್ಟಿ ಸಮುದಾಯ ಉತ್ತಮ ಸಾಧನೆ ತೋರಿವೆ.
ಮೇಲ್ವರ್ಗ ಹಾಗೂ ಒಬಿಸಿ(ಇತರ ಹಿಂದುಳಿದ ವರ್ಗ)ಯ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಿಶ್ವಬ್ಯಾಂಕ್‌ನ ಸ್ಯಾಮ್ ಆ್ಯಶರ್, ಡಾರ್ಟ್‌ವೌತ್ ಕಾಲೇಜಿನ ಪೌಲ್ ನೊವೊಸಾಡ್ ಹಾಗೂ ಮ್ಯಸಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಚಾರ್ಲಿ ರಫ್ಕಿನ್ ಅವರಿದ್ದ ಸಮೀಕ್ಷಾ ತಂಡವು 5,600 ಉಪ ಜಿಲ್ಲಾ ನಗರಗಳು ಹಾಗೂ 2,300 ಪಟ್ಟಣ ಮತ್ತು ನಗರಗಳನ್ನು ಆಧಾರವಾಗಿಟ್ಟುಕೊಂಡು ಅಧ್ಯಯನ ನಡೆಸಿದೆ. ಸ್ವಲ್ಪ ಪ್ರಮಾಣದ ಅಂತರ್‌ಪೀಳಿಗೆಯ ಏಳಿಗೆ ಸಂಭವಿಸಿದ್ದು ಆರ್ಥಿಕ ಉದಾರೀಕರಣದ ಬಳಿಕವೂ ಈ ಪ್ರಮಾಣದಲ್ಲಿ ಬದಲಾವಣೆಯಾಗಿಲ್ಲ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ದಲಿತರು ಹಾಗೂ ಎಸ್ಸಿ ಸಮುದಾಯದಲ್ಲಿ ಸಾಧ್ಯವಾಗಿರುವ ಅಲ್ಪ ಏಳಿಗೆಯ ಪ್ರಮಾಣ ಮುಸ್ಲಿಮರ ಏಳಿಗೆಯ ಮಟ್ಟದ ತೀವ್ರ ಇಳಿಮುಖದಿಂದಾಗಿ ಪ್ರಭಾವಹೀನವಾಗಿದೆ ಎಂದು ಅಧ್ಯಯನದ ಮುಕ್ತಾಯಭಾಗದಲ್ಲಿ ತಿಳಿಸಲಾಗಿದೆ.
ಅಮೆರಿಕದಲ್ಲಿರುವ ಆಫ್ರಿಕನ್ ಅಮೆರಿಕನ್ನರ ಏಳಿಗೆಯ ಮಟ್ಟ ಭಾರತದಲ್ಲಿರುವ ಮುಸ್ಲಿಮರ ಏಳಿಗೆಯ ಮಟ್ಟಕ್ಕಿಂತ ಉತ್ತಮವಾಗಿದೆ, ಆದರೆ ಆಫ್ರಿಕನ್ ಅಮೆರಿಕನ್ನರ ಹಾಗೂ ಭಾರತದ ದಲಿತರ ಹಾಗೂ ಎಸ್ಟಿ ಸಮುದಾಯದ ನಡುವಿನ ಪ್ರಮಾಣ ಹೋಲಿಕೆಯಾಗುತ್ತದೆ. ಉದಾರೀಕರಣ ಕಾಲದಿಂದ ಈಗಿನ ಕಾಲದವರೆಗೆ, ಭಾರತದ ಅಂತರ್ ಪೀಳಿಗೆಯ ಸರಾಸರಿ ಏಳಿಗೆಯು ಒಟ್ಟಾರೆಯಾಗಿ ಸ್ಥಿರವಾಗಿದೆ ಎಂದು ವರದಿಯ ಸಾರಾಂಶದಲ್ಲಿ ತಿಳಿಸಲಾಗಿದೆ. ಶೈಕ್ಷಣಿಕ ಹಂಚಿಕೆ ವ್ಯವಸ್ಥೆಯ ಕೆಳಾರ್ಧದಲ್ಲಿ ಇರುವ ದಂಪತಿಗೆ ಹುಟ್ಟಿದ ಮಗು ಯಾವ ಮಟ್ಟದವರೆಗೆ ಶಿಕ್ಷಣ ಪಡೆಯಬಹುದು ಎಂಬ ಪ್ರಶ್ನೆಯನ್ನು ಮುಂದಿರಿಸಿಕೊಂಡು ಅಧ್ಯಯನ ನಡೆಸಲಾಗಿದೆ ಎಂದು ಪೌಲ್ ನೊವೊಸ್ಟಾಡ್ ತಿಳಿಸಿದ್ದಾರೆ.
ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಂದ ಪಡೆದ ತೆರಿಗೆ ಮತ್ತು ಇತರ ಆದಾಯ ಮಾಹಿತಿಯನ್ನು ಅತ್ಯುತ್ತಮವಾಗಿ ಬಳಸಿಕೊಂಡು ವರದಿಯನ್ನು ರೂಪಿಸಲಾಗಿದ್ದು, ಇದು ಸಂಪೂರ್ಣ ವಿಶ್ವಾಸಾರ್ಹ ಎಂದು ಹೇಳಲಾಗದು ಎಂದು ಅವರು ತಿಳಿಸಿದ್ದಾರೆ. ಎಸ್ಸಿ ಮತ್ತು ಎಸ್ಟಿ ಸಮುದಾಯ ಈಗ ಹೆಚ್ಚಿನ ಏಳಿಗೆಯ ವೇಗ ಹೊಂದಿದ್ದರೂ, ಮೇಲ್ವರ್ಗದವರು ಹಾಗೂ ಒಬಿಸಿಗಳ ಸ್ಥಿತಿ ಯಥಾಪ್ರಕಾರವಿದೆ. ಮುಸ್ಲಿಮರು ಭಾರತದಲ್ಲಿ ಕನಿಷ್ಟ ಮೇಲ್ಮುಖ ಏಳಿಗೆಯ ಪ್ರಮಾಣ ಹೊಂದಿದ್ದಾರೆ. ಶಿಕ್ಷಣ ಹಂಚಿಕೆಯ ಕೆಳಾರ್ಧದಲ್ಲಿ ಇರುವವರ ಏಳಿಗೆಯ ಸರಾಸರಿ ಪ್ರಮಾಣ ಶೇ.34ರಷ್ಟಿದ್ದರೆ, ಮುಸ್ಲಿಮರ ಏಳಿಗೆಯ ಪ್ರಮಾಣ ಕೇವಲ ಶೇ.28ರಷ್ಟಿದೆ ಎಂದು ವರದಿ ತಿಳಿಸಿದೆ.
ಏಳಿಗೆಯ ಪ್ರಕ್ರಿಯೆಯಲ್ಲಿ ಭೌಗೋಳಿಕ ಸ್ಥಿತಿಗತಿಗೆ ಪ್ರಾಮುಖ್ಯತೆಯಿದೆ. ಸೂಚ್ಯಾಂಕದ ಕೆಳಮಟ್ಟದಲ್ಲಿ ಇರುವವರಲ್ಲೂ ನಗರಪ್ರದೇಶದಲ್ಲಿರುವವರು ಉತ್ತಮ ನಿರ್ವಹಣೆ ತೋರಿದ್ದಾರೆ. ನಗರಪ್ರದೇಶ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಜನರ ಏಳಿಗೆಯ ಅಂತರವು ಇಂದಿನ ಕಾಲದಲ್ಲಿ ಮೇಲ್ವರ್ಗದ ಹಿಂದೂಗಳು ಹಾಗೂ ಎಸ್ಸಿ ಸಮುದಾಯದವರ ನಡುವಿನ ಅಂತರಕ್ಕೆ ಸಮಾನವಾಗಿದೆ ಎಂದು ವರದಿ ತಿಳಿಸಿದೆ.







