ಜಾಲತಾಣದಲ್ಲಿ ಹರಿಬಿಟ್ಟಿರುವ ಸುದ್ಧಿ ಸತ್ಯಕ್ಕೆ ದೂರ: ಬಂಧಿತರ ಹಾರೀಸ್, ಇಮ್ರಾನ್ ಪೋಷಕರು
ಜಾನುವಾರು ಹತ್ಯೆ ಪ್ರಕರಣ
ಮೂಡಿಗೆರೆ, ಸೆ.21: ಜಾನುವಾರುಗಳನ್ನು ಕಳ್ಳತನ ಮಾಡಿ ಕೊಂದು ಮಾಂಸ ಮಾರಿ ಮಾರಾಟ ಮಾಡಿದ್ದಾರೆಂದು ಸುಳ್ಳು ದೂರು ನೀಡಿ, ನಮ್ಮ ಮಕ್ಕಳಿಬ್ಬರನ್ನು ಜೈಲಿಗೆ ಕಳುಹಿಸಿ, ನಮ್ಮ ಕುಟುಂಬಕ್ಕೆ ತೊಂದರೆ ಕೊಡುತ್ತಿದ್ದಾರೆಂದು ತಾಲೂಕಿನ ಅಣಜೂರು ಗ್ರಾಮದಲ್ಲಿ ಜಾನುವಾರು ಮಾಂಸ ಮಾರಾಟಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಶರಣಾಗಿ ಬಂಧಿತರಾಗಿರುವ ಹಾರೀಸ್ ಮತ್ತು ಇಮ್ರಾನ್ ಪೋಷಕರು ದೂರಿದ್ದಾರೆ.
ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಾನುವಾರು ವಿಚಾರದಲ್ಲಿ ಆರೋಪಿತರಾಗಿರುವ ನಮ್ಮ ಮಕ್ಕಳು ಜೇನುಬೈಲಿನ ವ್ಯಕ್ತಿಯೊಬ್ಬರಿಂದ ಕಳೆದ 20 ದಿನದ ಹಿಂದೆ 10 ಸಾವಿರ ರೂ.ನೀಡಿ ಜಾನುವಾರು ಖರೀದಿಸಿದ್ದರು. ಅದನ್ನು ಮಾಂಸ ಮಾಡಿದ್ದು ನಿಜ. ಆದರೆ 60 ಜಾನುವಾರುಗಳನ್ನು ಕಳ್ಳತನಗೈದು, ಕೊಂದು ಮಾಂಸ ಮಾಡಿ ಮಾರಾಟ ಮಾಡಿ, ಮಸೀದಿ ಹಿಂಭಾಗದಲ್ಲಿ ಅದಕ್ಕಾಗಿಯೆ ಶೆಡ್ ನಿರ್ಮಿಸಲಾಗಿದೆ ಎಂದು ಸಾಮಾಜಿಕ ಜಾಲಾ ತಾಣದಲ್ಲಿ ಕೆಲವರು ಸುಳ್ಳು ಸುದ್ದಿ ಹರಿಯಬಿಟ್ಟಿದ್ದಾರೆ. ಶೆಡ್ ನಿರ್ಮಿಸಿದ ಜಾಗಕ್ಕೂ ಮಸೀದಿಯ ಹಿಂಭಾಗಕ್ಕೂ ಸಂಬಂಧವೇ ಇಲ್ಲ. ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಶೆಡ್ ನಿರ್ಮಿಸಿಲ್ಲ ಎಂದಿದ್ದಾರೆ.
ನಮ್ಮ ಮನೆ ಹಿಂಭಾಗದಲ್ಲಿ ನಮಗೆ ಸೇರಿದ ಹಿಡುವಳಿ ಜಾಗದಲ್ಲಿ ಕುರಿ ಸಾಕಾಣಿಕೆ ಮಾಡಲು ಶೆಡ್ ನಿರ್ಮಿಸಲಾಗಿದೆ. ಅಲ್ಲಿ 40 ಕುರಿಗಳನ್ನು ಸಾಕಿ ಬೆಳೆಸಿದ್ದೆವು. ಅವುಗಳ ಪೈಕಿ 38 ಕುರಿಗಳು ಮಾರಾಟವಾಗಿವೆ. 2 ಕುರಿಗಳು ಈಗಲೂ ಇದೆ. ಈಗ ಆ ಶೆಡ್ ಖಾಲಿಯಾಗಿದ್ದು, ಅಲ್ಲಿ ಮಾಂಸ ಮಾಡುತ್ತಿದ್ದಾಗ ಜೇನುಬೈಲಿನ ಯುವಕನೊಬ್ಬ ಬಂದುನೋಡಿ ರಂಪಾಟ ಮಾಡಿದ್ದಾನೆ. ಇಲ್ಲಿ 60 ಜಾನುವಾರುಗಳ ತಲೆ ಸಿಕ್ಕಿದೆ ಎಂದು ಸುಳ್ಳು ವಿಚಾರ ಹಬ್ಬಿಸಲಾಗಿದೆ. ಕುರಿಗಳನ್ನು ಸಾಕುತ್ತಿದ್ದಾಗ ಅದಕ್ಕೆ ಕೆಲ ಚುಚ್ಚು ಮದ್ದುಗಳನ್ನು ನೀಡಬೇಕಿತ್ತು. ಅದನ್ನು ತಂದು ಶೆಡ್ಡಿನಲ್ಲಿ ಇಡಲಾಗಿದೆ. ಜಾನುವಾರುಗಳಿಗೆ ಅರವಳಿಕೆ ಚುಚ್ಚುಮದ್ದು ನೀಡಿ ಕೊಲ್ಲಲಾಗುತ್ತಿತ್ತು ಎಂದು ಕೆಲವರು ಆರೋಪಿಸುತ್ತಿರುವುದು ಶುದ್ಧ ಸುಳ್ಳು ಎಂದು ಸ್ಪಷ್ಪಪಡಿಸಿದ್ದಾರೆ.